Friday, October 31, 2008

ವಿವಾಹ ಆಮಂತ್ರಣ

ಆತ್ಮೀಯರೇ,

ನನ್ನ ವಿವಾಹವು
ಸೀಮಾ ಎನ್ ಕೆ
ಇವರೊಂದಿಗೆ ನಡೆಯುವಂತೆ
ಗುರು ಹಿರಿಯರು ನಿಶ್ಚಯಿಸಿದ್ದು
ಈ ಶುಭ ಸಂದರ್ಭದಲ್ಲಿ ತಮ್ಮ ಇರುವಿಕೆ
ನಮ್ಮ ಸಂತಸವನ್ನು ಇಮ್ಮಡಿಸಲಿದೆ
ನಿಮ್ಮ ಹಾರೈಕೆ ಆಶೀರ್ವಾದ ನಮ್ಮೊಂದಿಗಿರಲಿ,
ತಮ್ಮ ಬರುವಿಕೆಯನ್ನುನ ಇದಿರು ನೋಡುವ

ನಿಮ್ಮ
ಸಿಮ್ಮಾ
ಆರತಕ್ಷತೆ ಮುಹೂರ್ತ
೦೮-೧೧-೨೦೦೮ ಶನಿವಾರ ೦೯-೧೧-೨೦೦೮ ಭಾನುವಾರ
ಸಂಜೆ ೭.೦೦ ರಿಂದ ೯.೦೦ ಬೆಳಿಗ್ಗೆ ೧೧.೨೦ ರಿಂದ ೧೧.೫೫

ಸ್ಥಳ
ಎನ್ ಎ ಕೆ ಕಲ್ಯಾಣ ಮಂಟಪ
ನಂ ೨೭೫/೮, ನ್ಯೂ ಟಿಂಬರ್ ಯಾರ್ಡ್ ಲೇ ಔಟ್,
(ಸ್ಯಾಟಲೈಟ್ ಬಸ್ ನಿಲ್ದಾಣದ ಹತ್ತಿರ) ಮೈಸೂರು ರಸ್ತೆ, ಬೆಂಗಳೂರು





Thursday, September 25, 2008

ನಾ ದೂರವೇ ಇರುತ್ತೇನೆ

ನಾ ದೂರವೇ ಇರುತ್ತೇನೆ; ಇರಲೇ ಬೇಕು ಕೂಡ.
ನಾ ದೂರದೇ ಇರುತ್ತೇನೆ; ದೂರ ಬಾರದು ಕೂಡ.
ದೂರವೇಕಿರುತ್ತೇನೆ ? ನೀ ಬಿಟ್ಟು ಹೋಗುವ
ನೆನಪುಗಳ ಆರಿಸಿ ಕೊಳ್ಳಲು.
ಅಗಲುವಿಕೆಯ ಗಾಯವ ಆಗಿಂದಾಗ್ಗೆ
ಒರೆಸಿ ಕೊಳ್ಳಲು.
ಮತ್ತು ದೂರದಲ್ಲಿ ಸಾಗುವ ನಿನಗೊಂದು
ಶುಭ ಹಾರೈಸಲು.

Friday, September 12, 2008

ಬರಿ ಗಾಲು ಮತ್ತು ಚಪ್ಪಲಿ

ಈವತ್ತು ಯಾಕೋ ಕಾಲಿನ ಕಡೆ ನೋಡ್ತಾ ಇರುವಾಗ ಯಾಕೋ ಬೆತ್ತಲೆ ಪಾದಗಳು ನೆನಪಾದವು. ಹೌದಲ್ಲಾ ಬರಿ ಗಾಲಲ್ಲಿ ನಡೆದು ಎಷ್ಟೊಂದು ದಿನವಾಯ್ತಲ್ಲ ಅಂದು ಅಂದು ಕೊಂಡವನು ಚಪ್ಪಲಿ ಬಿಟ್ಟು ಬರಿಗಾಲ್ಲಿ ನಡೆದೆ. ಮೊದಲು ಮಣ್ಣು ಕೂಡ ಚುಚ್ಚಿದಂತೆನಿಸಿದರೂ ನಂತರ ಹೊಂದಿ ಕೊಂಡೆ. ಮಣ್ಣು, ಕೆಸರು, ಮಳೆಯ ನೀರಿನ ತಂಪು, ಹುಲ್ಲಿನ ಕಚಗುಳಿ, ಕಾಣದ ಸಣ್ಣ ಮುಳ್ಳಿನ ಚುಚ್ಚುವಿಕೆ. ಓಹ್! ಎಲ್ಲಾ ಅದೆಷ್ಟು ಹಿತವೆನಿಸಿತು! ಇದನ್ನೆಲ್ಲಾ ಯಾಕೆ ಇಷ್ಟು ದಿನ ಮರೆತೆ ಎಂದು ನನ್ನ ನ್ನೇ ನಾನು ಬಯ್ದು ಕೊಂಡೆ.
ಆ ದಿನಗಳು ಚಪ್ಪಲಿಯಿಲ್ಲದ ಆ ದಿನಗಳು ನೆನಪಾದವು. ಚಪ್ಪಲಿಯಿಲ್ಲದೆ ಮುಳ್ಳು ತುಳಿದಿದ್ದು (ಜಾಲಿ ಮುಳ್ಳು) ನೆನಪಾಯ್ತು. ನಿಂಗೊತ್ತಾ ಈ ಮುಳ್ಳು ಮುರಿತದಲ್ಲೂ ವಿಧಗಳಿವೆ. ಹಸಿ ಜಾಲಿ(ಬಳ್ಳಾರಿ ಜಾಲಿ) ತುಳಿದ್ರೆ ಅದು ಕಾಲಲ್ಲಿ ಮುರಿಯೋದಿಲ್ಲ, ಆದರೆ ಆ ನೋವಿದೆಯಲ್ಲ ಮಾರಾಯ್ತಿ! ಅಬ್ಬಾ ಅದನ್ನ ಅನುಭವಿಸಿಯೇ ತೀರ ಬೇಕು. ಕಾಲು ಎತ್ತಿಡಲೂ ಸಾಧ್ಯವಾಗೋದಿಲ್ಲ ಗೊತ್ತಾ? ಮೂರು ದಿನ ಬೇಕು ಸರಿಯಾಗಿ ಓಡಾಡ್ಲಿಕ್ಕೆ.
ಇನ್ನು ಕೊಳೆತ ಜಾಲಿ ಮುಳ್ಳು ತುಳಿದ್ರಂತೂ ಕರ್ಮ! ಕಾಲಲ್ಲಿ ಮುಳ್ಳು ಮುರಿಯೋದಂತೂ ಗ್ಯಾರಂಟಿ. ಜೊತೆಗೆ ನೋವು ಮತ್ತು ಕಾಲಿಟ್ಟಾಗಲೆಲ್ಲಾ ಈಟಿಯಿಂದ ಅಂಗಾಲಿಗೆ ಚುಚ್ಚಿದಂತಹ ಅನುಭವ. ಅನುಭಾವಿಸ ಬೇಕು ಆ ಸ್ವರ್ಗ! ಅದನ್ನ ಬಗೆದು ತೆಗೀಲಿಕ್ಕು ಬರೋದಿಲ್ಲ. ಸ್ವಲ್ಪ ಬಗೆದು ಕಳ್ಳಿ ಅಥವಾ ಎಕ್ಕೆ ಅಥವಾ ಕಿವಿಯಲ್ಲಿನ ಕಸವನ್ನು ತೆಗೆದು ಅಥವಾ ಎಮ್ಮೆ ಸಗಣಿಯನ್ನು ಕಟ್ಟಿ ಅದು ಕೀವಾಗುವುದನ್ನು ಕಾಯ್ದು ಮೂರ್ನಾಲ್ಕು ದಿನ ಕಾದು ಬಗೆದು ತೆಗೆದಾಗ ನಿಜಕ್ಕೂ ಸ್ವರ್ಗ ಸುಖ!
ಅಂದ ಹಾಗೆ ಹೇಳುವುದ ಮರೆತೆ, ಈ ಮುಳ್ಳು ಬಗೆಸಿ ಕೊಳ್ಳೋ ಸುಖ ಇದೆಯಲ್ಲಾ ಎಂತಾ ಮಜ ಗೊತ್ತಾ? ಬಗೆಯುವವರ ಕೈಯ್ಯಲ್ಲಿ ಕಾಲು ಕೊಟ್ಟು ಹಲ್ಲು ಕಚ್ಚಿ ಹಿಡಿದು(ಒಮ್ಮೊಮ್ಮೆ ಬಟ್ಟೆ ಕಚ್ಚಿ) ಬಗೆಸಿ ಕೊಳ್ಳೋದು ಓಹ್! ಮಸ್ತ್ ಮಾರಾಯ್ತಿ.

ಹಾಗೆಯೇ ಮುಳ್ಳು ಬಗೆಯೋದು ಕೂಡ ಒಂದು ಕಲೆ ಗೊತ್ತಾ? ಮುಳ್ಳು ಹೊಕ್ಕವರ ಗಮನವನ್ನ ಬೇರೆಡೆಗೆ ತಿರುಗಿಸಿ ನಿಧಾನಕ್ಕೆ ಬಗೀಬೇಕು. ಮುಳ್ಳು ಬಗೆಯಲು ಬಳಸುವ ಸಾಧನಗಳಲ್ಲೂ ವೈವಿಧ್ಯತೆಯಿದೆ. ಮುಳ್ಳು(ಮುಳ್ಳನ್ನ ಮುಳ್ಳಿನಿಂದಲೇ ತೆಗೀ ಬೇಕಲ್ಲ), ಸೂಜಿ, ಪಿನ್ನು, ಮುಳ್ಳಗಡ್ಡಿ ಹೀಗೇ.

ಆ ಅನುಭವಗಳೇ ಅಂತಹವು. ಕಾಲ ತುಂಬೆಲ್ಲಾ ತೂತುಗಳೇ ಇರ್ತಿದ್ದವು! ಈಗ ಬರೀ ಗಾಲು. ನುಣ್ಣನೇ ಖಾಲಿ ಕಾಲು!..!

Wednesday, August 6, 2008

Say Laxmana

He went to Forest
She 'Pathivrathe' followed him.
She can'n live without him.
You, the great brother!Took the backbone of Rama.
That's allright,
But, what about me?

I heard that, Ravana took Sita to Lanka
From that Rama became unconscious!
You the great brother! Gave support to him.
You all together
constructed a bridge to Lanka
and killed Ravana.
That's all for Rama
To mingle with Sita.
Because they can'n live lonely.
Yes, it's true.
But, what about me?
Laxmana, why can't you think about me?
Why these Ayodhya people and all other
didn't look about me?

Say Laxmana, it's me, your Wife!
Why you didn't ask a word about me?!!!

(ಇದು ನಾನು English ನಲ್ಲಿ ಬರೆದ ಕವನ. ಆದ್ರೆ ನನಗೆ ಈ ವ್ಯಾಕರಣ ಸರಿಯಾಗಿ ಗೊತ್ತಿಲ್ಲ. ದಯವಿಟ್ಟು ತಪ್ಪಿರುವುದನ್ನು ತಿದ್ದಿ.)

Tuesday, August 5, 2008

ಕ್ಲಿಕ್..!


ರೆಡಿ...
ಓ.ಕೆ.
ಕ್ಲಿಕ್.!!

ಮತ್ತೆ ಯಾಕೆ ಬಂದೆ..

ಮತ್ತೆ ಯಾಕೆ ಬಂದೆ ನನ್ನ ಬಾಳಿಗೆ,
ನನ್ನ ಈ ಹಾಳೆಗೆ,
ಮತ್ತೆ ಬರುವೆಯಾ ನನ್ನ ನಾಳೆಗೆ??

ಬಿಡು.. ಬಿಡು... ಬಿಟ್ಟು ಬಿಡು,
ನನ್ನ, ನನ್ನ ಪಾಡಿಗೆ.
ಬರುವುದಿದ್ದರೆ ಬಂದು ಬಿಡು
ಜೊತೆಯಾಗಿ ನನ್ನ ಹಾದಿಗೆ.
ತೊಡರದಿರು ಎದುರಾಗಿ ಹೀಗೆ
ಅಡಿಗಡಿಗೆ.

ಒಂದು ಸಾಲಿನ ಬಗ್ಗೆ ಒಂದಿಷ್ಟು....

ಸುಮಾರು ಐದು ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ಈ ಸಾಲನ್ನ ಹೇಳಿದ್ದ ನೆನಪು, ದಯವಿಟ್ಟು ಇದರ ಬಗ್ಗೆ ಗೊತ್ತಿದ್ದವರು ಒಂದಿಷ್ಟು ಹೇಳಿ.

"ದೀಪವಾರಿಸು ಗೆಳೆಯ ನನಗೆ ಬೆಳಕು ಬೇಕಾಗಿದೆ"

.........ಮಲಗಿತ್ತು ಮುಗಿಲು

ದುಡಿದು ಬೆವರಿ ಬಂದ ದೇಹ,
ಏನು ಮಾಡಿದರೂ ತೀರದ ದಾಹ.
ಕಗ್ಗತ್ತಲ ಕೋಣೆಯ ತುಂಬಾ ಬೆವರ ಮುಗ್ಗಿನ ಘಮ,
ಬೆರೆಯುತ್ತಿದೆ ಅದರೊಂದಿಗೆ ದುಂಡು ಮೊಗ್ಗಿನ ಘಮ!

ಅದುರುವ ಅಧರಗಳ ಮಿಂಚು.
ಹುಡುಕುತಿವೆ ಕಣ್ಣು: ಏನೇನೋ ಸಂಚು!!
ಮೆಲ್ಲನೆ ಜಾರಿದಂತೆ ನಾಚಿಕೆಯ ಪರದೆ
ಮೆಲ್ಲಗೆ ಹಾರಿತ್ತು ಅರಿವೆ, ಅಡ್ಡ ಬರದೆ.

ನಾಚಿ ಸರಿದಿದೆ ಬೆಳಕು, ಸುತ್ತಲೂ ಕತ್ತಲೆ,
ಬಾಚಿ ತಬ್ಬಲು ಬರೀ ಬೆತ್ತಲೆ!!
ನಾನೋ ಕಲಿತವನಲ್ಲ ಈಜು,
ಆದರೂ ಈಜಿದ್ದೆ, ಅದೇ ಮೋಜು!

.....
ಅರಳಿದ ಮೈ ಮನ, ಬಾಗಿದ ಕಾಮನ ಬಿಲ್ಲು,
ತಬ್ಬಿ ಮಲಗಲು, ಮಲಗಿತ್ತು ಮುಗಿಲು...!!!!!

Friday, July 25, 2008

ತುಂಗಾ ಸೇತುವೆಯಿಂದ ತುಂಬಿ ಹರಿವ ತುಂಗೆಯ ಸೆರೆ ಹಿಡಿದು ತಂದು...











ಕೊಪ್ಪ ತಾಲ್ಲೂಕಿನ ನಾಗಲಾಪುರ(ಹರಿಹರಪುರ)ದ ಬಳಿಯ ಸುಮಾರು ನೂರು ವರ್ಷ ಹಳೆಯದಾದ ತುಂಗಾ ಸೇತುವೆಯಿಂದ ತುಂಗೆಯನ್ನು ಸೆರೆ ಹಿಡಿದು ತಂದಿದ್ದೇನೆ, ನಿನಗಾಗಿ.





Thursday, July 24, 2008

ಮೌನವಾಗುತ್ತೇನೆ....

ಮೌನವಾಗುತ್ತೇನೆ,
ಮತ್ತೂ ಮೌನವಾಗುತ್ತೇನೆ.
ನನಗೆ ಗೊತ್ತು:
ನೀನಿಲ್ಲದ ಈ ಹೊತ್ತು,
ಮೌನವಾಗಲೇ ಬೇಕು.
ನನ್ನೊಳಗೆ ನಾನಾಗಿ.

ಆದರೂ ನಿನಗಾಗಿ ಮನದಲ್ಲಿದ್ದ ಮಾತುಗಳು
ಮತ್ತೆ ಹರಿಯಲೇ ಬೇಕು,
ಭಾವಗಳಾಗಿ, ನಿಟ್ಟುಸಿರಾಗಿ,
ದಟ್ಟ ನೆನಪುಗಳ ಪುಟ್ಟ ನರಳಿಕೆಯಾಗಿ,
ಹರಿಯಲೇ ಬೇಕು
ಮೊದಲು ಭಾವವಾಗಿ,
ನಂತರ ಹಾಡಾಗಿ ಹೆಮ್ಮೌನದಲಿ,
ಮತ್ತೆ ಮೌನವಾಗಿಯೇ...!

Wednesday, July 23, 2008

ಒಂದು ಪ್ರತಿಕ್ರಿಯೆ...

ತೇಜಸ್ವಿನಿಯವರ
**ನನ್ನ-ನಿನ್ನ ನಡುವೆ**
ಒಲುಮೆಯ ಸಾಗರವಿದೆ
ನೋವ-ನಲಿವ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!
ಕವನಕ್ಕೆ ಪ್ರತಿಕ್ರಿಯೆ:-
ಒಲುಮೆಯ ಸಾಗರವಿರುವುದಕೆ
ನೋವ-ನಲಿವ ಅಲೆಗಳೇಳುವುದು.
ಒಲುಮೆಯ ಸಾಗರವಿರುವುದಕೆ
ಮುತ್ತುಗಳು ಅರಳುವುದು.
ಒಲುಮೆಯ ಸಾಗರವಿರುವುದಕೆ
ಆಗಾಗ ಸುನಾಮಿಯೂ ಏಳುವುದು

ಆದ್ದರಿಂದಲೇ
ಅದಕ್ಕೆ ಒಲುಮೆಯೆನ್ನುವುದು!!


ಸಿರಿಮನೆ ಫಾಲ್ಸ್ ನ ಭವ್ಯ ನೋಟ...





























Monday, July 21, 2008

ಕುಂದಾದ್ರಿಯ ನೆತ್ತಿಯಿಂದ ಕಿತ್ತು ತಂದಿದ್ದು...

ಹುಷಾರು ಮಾರಾಯ್ತಿ ಮುಂದೆ ನೋಡು ಬಿದ್ದು ಬಿಟ್ಟೀಯೆ..

ಶ್... ಸುಮ್ಮನಿರು ಮಾತು ಬೇಡ...


ಹೇಯ್ ಆ ಹೂವನ್ನೇಕೆ ಕೀಳಲು ಹೋಗುತ್ತೀ..

ಮೇಗುಂದಾದಿಂದ ನಿನಗಾಗಿ ತಂದಿದ್ದು....


ಮೊನ್ನೆ ನೀ ಬರೊಲ್ಲವೆಂದು ತಿಳಿದಾದ ಮೇಲೆ ಒಬ್ಬನೇ ಹೋಗಿದ್ದೆ.
ಅಲ್ಲಿಂದ ತಂದಿದ್ದೇನೆ ನಿನಗಾಗಿ,
ಇದೆಲ್ಲವನ್ನೂ ಹೆಕ್ಕಿ,
ನನ್ನ ಪ್ರೀತಿಯ ಹಕ್ಕಿಯೇ ನಿನಗಾಗಿ.

ಅಂದ ಹಾಗೆ ನಿನಗೆ ಗೊತ್ತಾ..
ಪೊಲೀಸರು ಹುಡುಕುತ್ತಿದ್ದಾರಂತೆ!
ಯಾಕೆ ಗೊತ್ತಾ..?

ಯಾರಿಗೂ ಹೇಳ ಬೇಡ
ನಾನು ಅಲ್ಲಿ ಕಂಡದ್ದೆಲ್ಲವನ್ನೂ
ಸೆರೆ ಹಿಡಿದು ತಂದಿದ್ದೇನೆ ನಿನಗಾಗಿ
ಏನನ್ನೂ ಉಳಿಸದಂತೆ...!!!!!!

Tuesday, July 15, 2008

ನಾನೂ ಬರೆಯ ಬೇಕಿದೆ "ಚೆ"..

(ನನ್ನಳಗಿನ ಹಾಡು ಕ್ಯೂಬಾ ಓದಿದ ಮೇಲೆ ಬರೆದದ್ದು)
ನಾನೂ ಬರೆಯ ಬೇಕಿದೆ ಹಾಡು,
ನಿನ್ನಂತೆಯೇ "ಚೆ".
ಸೋಮಾರಿಯಾದ ನನ್ನ ದೇಶಕ್ಕೆ ಬಿಸಿ ಮುಟ್ಟಿಸಲು,
ತೂಕಡಿಸುತ್ತಿರುವ ನನ್ನ ಜನರ ಮಂಕು ಓಡಿಸಲು,
ಕೋವಿ ಹಿಡಿದು ನೀ ಬರೆದಂತೆಯೇ ನನ್ನೀ ಪೆನ್ನಿಂದ.
ನಾನೂ ಬರೆಯ ಬೇಕಿದೆ "ಚೆ".

ಬರೆಯುವುದಕ್ಕೆ ಮುನ್ನ ನಾನೇ
ಮೊದಲು ಬಯಲಾಗ ಬೇಕಿದೆ.
ಮನದಲ್ಲಿ ತುಂಬಿರುವ ಸಂಕೋಲೆಗಳ
ಕಿತ್ತೊಗೆಯ ಬೇಕಿದೆ.
ಹೋರಾಟದ ಪೆಡಲು ತುಳಿಯ ಬೇಕಿದೆ,
ನಂತರವಷ್ಟೇ
ನಾನೂ ಬರೆಯ ಬೇಕಿದೆ "ಚೆ".

ನೋಡಿ, ನೋಡಿ ಮನಸ್ಸು ಕುದಿಯುತ್ತಿದೆ,
ನಿಂತ ನೀರಂತೆ ಕೊಚ್ಚೆಯೆದ್ದು, ಹಸಿರಾಗಿ
ಪಾಚಿಗಟ್ಟಿ ಒಣಗುತ್ತಿರುವ ನ್ನವರ ಕಂಡು.
ಮರುಗುತ್ತಿದೆ "ಚೆ"

ಮರುಕ ಬೇಕಿಲ್ಲ, ಬಾ "ಚೆ"
ನೀ ಇಲ್ಲೇ ಹುಟ್ಟಿ,
ಯಾಕೆಂದರೆ ಮತ್ತೆ ಯಾರೂ ಬರೆಯಲಾರರು
ನಿನ್ನಂತೆ........

ತಣಿದ ಭುವಿಯರಳಿತ್ತು.........

ಮೆಲ್ಲಗೆ ಗಾಳಿಯೇಳುತ್ತಿದೆಯೆನಿಸುತ್ತಿತ್ತು........
ಅಲ್ಲೆಲ್ಲೋ ಸುಂಟರಗಾಳಿಯೆದ್ದು,
ಮೋಡ ಕೆಂಧೂಳಿಯಿಂದ ಕೆಂಪಗಾಗಿತ್ತು.
ಎಲ್ಲೋ ಹನಿಯುತ್ತಿರ ಬೇಕು:
ಘಮ ಮೂಗಿಗಡರುತ್ತಿತ್ತು.
ರೊಯ್ಯನೆ ಬಿರುಗಾಳಿಯದ್ದಿತು.
ಮರ, ಗಿಡ, ಬೆಟ್ಟ.... ಊಹೂಂ...ಯಾವ ತಡೆಯೂ ಇಲ್ಲ.
ಯಾವುದೇ ತಡೆಯಿಲ್ಲ: ಆ ಬಿರುಸಿಗೆ.!
ಅಬ್ಬರದ ಮಳೆ, ಹುಚ್ಚು ಹೊಳೆ.
ಅದೇನು ರಭಸ, ಅದೇನು ಮೊರೆತ!
ಹಾಗೆಯೇ ತಣ್ಣಗಾಯಿತು..!!!

ತಣಿದ ಭುವಿಯರಳಿತ್ತು,
ದಣಿದ ಮಳೆ ಭುವಿಯಲ್ಲಿ ಹುದುಗಿತ್ತು.
ಈಜು ಮುಗಿದಿತ್ತು.!!

ಯಾಕೆಂದರೆ ನನ್ನೊಂದಿಗೆ ನೀನಿರುವೆಯಲ್ಲ.......

ತೀವ್ರ ಚಳಿ, ಮೈ ಮರಗಟ್ಟುವಂತಹ ತಂಗಾಳಿ.
ಮೈ ಮೂಳೆಯ ನಡುವಲ್ಲೂ ನಡುಕ,
ಹಲ್ಲುಗಳು ಕಟಕಟ,
ನಾಲಗೆ ತೊದಲು, ಮಾತು ಹೊರಡುತ್ತಿಲ್ಲ,
ಮನೆಯ ಸುತ್ತೆಲ್ಲಾ ಕಾವಳ,
ಹೊದೆಯಲು ಹೊದಿಕೆಯಿಲ್ಲ,
ಮೈ ಮೇಲೆ ಚೂರೂ ಬಟ್ಟೆಯಿಲ್ಲ,
ಆದರೂ ಚಳಿಯಿಲ್ಲ...!!!!! ಬೆವರ ಧಾರೆ ನಿಂತಿಲ್ಲ...!!!!
ಯಾಕೆಂದರೆ ನನ್ನೊಂದಿಗೆ ನೀನಿರುವೆಯಲ್ಲ..!!!!

Wednesday, July 2, 2008

ಬಾ ಸುಮ್ಮನೇ.....

ಬಾ ಸುಮ್ಮನೇ,
ಬಾಗಿಲ ಅಗುಳಿ ಹಾಕು; ಮನದ ಬಾಗಿಲ ತೆರೆ.
ಮೈ ಮನವ ಹಗುರ ಗೊಳಿಸು,
ಹರಿಯಲಿ ಒಲವ ಧಾರೆ..!
ಯಾಕೀಗ ಮಾತುಗಳ ಗೊಡವೆ?
ಬೇಡ ಯಾವುದೇ ಪರಿವೆ,
ಹಾರಿ ಹೋಗಲಿ ಬಿಡು ಆ ಅರಿವೆ,
ಯಾಕೆಂದು ನೀ ಮುಂದೆ ಅರಿವೆ.
ಬಯಲಾಗು ಬೆತ್ತಲಾಗು ಮೈ ಮನ ಎರಡನ್ನೂ,
ಅಂಜಿಕೆ ನಾಚಿಕೆಯ ಗೊಡವೆಯೇಕೆ,
ಬೇಡ ಯಾವುದೇ ತೆರೆ,
ಪ್ರಣಯದ ಬಾಗಿಲು ತೆರೆ,
ಬಾ ನನ್ನೊಳಗೆ ನೀ ಮೊರೆ,
ಬರಲಿ ಒಲವ ನೆರೆ.
ಬಾ ನನ್ನೊಳಗೆ ಈಸು ಬೀಳು
ಏಕೆಂದರೆ, ಇಂದು ನಮ್ಮ ಮೊದಲಿರುಳು....!!!!
(ನಮ್ಮ ಮೊದಲಿರುಳಿಗೆಂದು ಬರೆದದ್ದು)

Saturday, June 28, 2008

ಬರೆಯುತ್ತೇನೆ.....

ಬರೆಯುತ್ತೇನೆ
ನಿನ್ನನ್ನು ಮರೆಯಲೆಂದು...
ಆದರೆ
ಬರೆಯುತ್ತಾ ಬರೆಯುತ್ತಾ..
ಮರೆಯುತ್ತೇನೆ
ನಿನ್ನನ್ನು ಮರೆಯ ಬೇಕೆಂಬುದನ್ನು..!!!

Monday, June 16, 2008

ನೋವಾಗಲೇ ಬೇಕೇ?!

(ಸುಮ್ಮನೇ ಬರೆದದ್ದು)
ಬರೆಯಲು ನೋವಾಗಲೇ ಬೇಕೇ?
ಹೇ... ಮನಸೇ..
ಏನಿದು ವಿಚಿತ್ರ..!
ಬರೆ ಬೀಳಲೇ ಬೇಕೇ
ನೀನು ಸಂವೇದನೆಗೊಳ್ಳಲು.
ವೇದನೆಯೇ ಸಂವೇದನೆಯ ಮೊಲವೇ?!
ಹೊಡೆತ ಬೀಳಲೇ ಬೇಕೇ
ನೀ ಎಚ್ಚರಗೊಳ್ಳಲು.
ನಿನ್ನನ್ನು ನೀ ಕಂಡು ಕೊಳ್ಳಲು.
ಗಾಯ ವೃಣವಾಗಿ ಕೀವಾಗಿ ಸೋರ ಬೇಕೇ,
ನಿನ್ನೊಳಗಿನ ೊರತೆ ಒರೆಯಲು.
ನಾ ಬಿದ್ದು ತೊಳಲಲೇ ಬೇಕೇ
ನಿನ್ನೊಳಗಿನ ದನಿ ಅರಳಲು!
ಅರಳಿ ನನ್ನೊಳಗೆ ನಾ ಮರಳಲು...
ಎಂತಹ ವಿಚಿತ್ರ...!!!

ನೋವಿದೆ....ನಿಜ. ಆದರೆ ಅದಕ್ಕೂ ಮೀರಿದ.......

ನೋವಿದೆ....ನಿಜ..ಬೇಸರವೂ ಇದೆ.
ಅದಕ್ಕೆಲ್ಲಾ ಕಾರಣವೂ ಇದೆ.
ಅದರ ಮೊಲ ನಾನೆಂದೂ ಗೊತ್ತಿದೆ...
ಆದರೆ... ಗೊತ್ತಿರಲಿ ಹುಡುಗಿ..
ಅದೆಲ್ಲವನ್ನೂ ಮೀರಿದ ಒಲವೂ ನನ್ನಲ್ಲಿದೆ!!

ಗೊತ್ತಿದೆ; ನಿಜ! ನನ್ನಲ್ಲಿ ದ್ವಂದ್ವವಿದೆ,
ಚಂಚಲತೆಯಿದೆ.. ನಾ ದೃಢನಲ್ಲವೆಂದೂ ಗೊತ್ತಿದೆ.
ನಿನ್ನ ನೋವಿಗೆ ನಾನೇ ಕಾರಣವೆಂದೂ ಗೊತ್ತಿದೆ.
ಆದರೆ... ಗೊತ್ತಿರಲಿ ಗೆಳತಿ
ಅದನ್ನೆಲ್ಲಾ ಮೀರಿದ ಅಕ್ಕರೆಯಿದೆ.!!

ನಿನ್ನ ಮೌನದ ಹಿಂದಿನ ನೋವಿನ ಅರಿವಿದೆ.
ನಿನ್ನ ಬೇಸರದ ಹಿಂದಿನ ಒತ್ತಡದ ಒಳಸುಳಿ ತಿಳಿದಿದೆ.
ಅದರ ಬೇರೂ ನನ್ನಲ್ಲಿದೆಯೆಂಬುದೂ ಗೊತ್ತಿದೆ.
ಆದರೆ... ನನ್ನೊಲವೇ...
ಒಮ್ಮೆ ಹಾಗೆಯೇ ನೋಡು..
ಈ ಜೀವನವಿಡೀ ಮೊಗೆದರೂ ಬರಿದಾಗದ ಒಲವ ಒರತೆಯಿದೆ!!!

ಬಯ್ದು ಬಿಡು ಒಮ್ಮೆ..
ರೇಗಿ ಬಿಡು, ಕೂಗಾಡು, ಕಿರುಚಾಡು...
ಮೌನಿಯಾಗ ಬೇಡ..
ದಯವಿಟ್ಟು.... ಗೆಳತಿ..
ಮೌನಿಯಾಗ ಬೇಡ.

Saturday, June 14, 2008

ಜಿಟಿ ಜಿಟಿ ಮುಂಗಾರು ಮಳೆಯಂತಹವಳೇ........

ಹಾಯ್ ಈ ಜಿಟಿ ಜಿಟಿ ಮಳೆಗಿಂತಲೂ ಮನದೊಳಗೆ ಜಿಟಿ ಜಿಟಿ ಅನ್ನುವ ಮುಂಗಾರು ಮಳೆಯಂತಹವಳೇ, ಹೇಗಿದ್ದೀಯ! ನಿನಗೇನು ಚೆನ್ನಾಗೇ ಇರ್ತೀಯ ನಾನ್ತಾನೇ ಇಲ್ಲಿ ನಿನ್ನ ನೆನಪಲ್ಲಿ ಸಾಯುವವನು. ಕರುಣೆಯಿಲ್ಲದ ಕಟುಕಿಯೇ ಏಕೆ ಹೀಗೆ ನನ್ನೆದೆಯಲ್ಲಿ ಕುಟುಕುತ್ತೀಯೇ? ಚುಟುಕು ಪ್ರೀತಿಯೂ ಇಲ್ಲದವಳು. ಇರಲಿ ಬಿಡು ಏನು ಮಾಡಲಿಕ್ಕಾಗುತ್ತೆ, ಬಯಸಿ ಬಯಸಿ ಪಡೆದದ್ದಲ್ಲವೇ? ಅನುಭವಿಸ ಬೇಕು. ಯಾವ ಜನ್ಮದ ಕರ್ಮ ೀ ಜನ್ಮದಲಿ ಬಂದು ನಮ್ಮಿಬ್ಬರನು ಹೀಗೆ ಬಂದಿಸಿಹುದೋ ಕಾಣೆ. ಓ ಕೆ, ಓ ಕೆ. ಸಾರಿ ಸರೀನಾ? ಇವತ್ತು ಬೇರೇನೋ ಮಾತಾಡ್ಲಿಕ್ಕಂತ ಕುತವನು ನಿನ್ನ ಮೇಲಿನ ಸಿಟ್ಟಿಗೆ ಬೇರೇನೇನೋ ಮಾತಾಡ್ತಾ ಕೂತೆ. ಸರಿ ವಿಷಯಕ್ಕೆ ಬರ್ತೀನಿ ಸೀಮ್ ಬೆಳಿಗ್ಗೆಯಿಂದ ಒಬ್ಬನೇ ಇದ್ದೇನೆ ಈ ಮನೆಯಲ್ಲಿ ಒಂದು ನರ ಪ್ರಾನಿಯ ಸದ್ದೂ ಇಲ್ಲ. ಜಿಟಿ ಜಿಟಿ ಮಳೆ, ಅಲ್ಲೆಲ್ಲೋ ಕೂಗುವ ಹಕ್ಕಿಗಳ ದನಿ, ಬಿಟ್ಟರೆ ನಾನೊಬ್ಬನೇ. ಈ ಒಂಟಿತನವಿದೆಯಲ್ಲ ಸುಮ್ಮನಿದ್ದರೆ ನಮ್ಮನ್ನೇ ಕೊಲ್ಲುತ್ತದೆ, ಅದಕ್ಕೇ ನಾನೀ ಒಂಟಿತನವನ್ನ ಸುಂದರ ಏಕಾಂತವನ್ನಾಗಿ ಬದಲಾಯಿಸಿ ಕೊಳ್ಳುತ್ತೇನೆ. ನಿನಗೆ ಗೊತ್ತಾ ನಾನೀ ಏಕಾಂತದಲ್ಲಿದ್ದಾಗ ತೇಜಸ್ವಿ ಬಂದು ನನ್ನೊಟ್ಟಿಗೆ ಕೂರುತ್ತಾರೆ, ಮಂದಣ್ಣ, ಕರ್ವಾಲೋ, ಪೀರನೊಂದಿಗೆ. ಕಲ್ಲು ಕರಗುವ ಸಮಯದಲ್ಲೂ ಲಂಕೇಶ್ ಬಂದು ಬೇಸರ ಕಳೆಯತ್ತಾರೆ. ಅಯ್ಯೋ ಈ ಸಿಟ್ಟಿನ ಮೂಕಜ್ಜಿಯ ಮುದುಕನ ಕಾಟ ಅಳಿದ ಮೇಲೂ ತಪ್ಪಲ್ಲ. ಮರಳಿ ಮಣ್ಣಿಗೆ ಬರ್ತೇನೆ ಅಂತ ಹಠ ಹಿಡೀತಾನೆ, ಅದೆಂತಹಾ ಜೀವನ ಪ್ರೀತಿಯೋ ಈತನದ್ದು! ಹಾಗೆಯೇ ನಿನ್ನ ನೆನಪಾಗುತ್ತೆ, ಹಾಗೆಯೇ ಎಲ್ಲೋಮೂಲೆಯಿಂದ ಮಲ್ಲಿಗೆಯ ಘಮ ಮೂಗುಗಡರುತ್ತೆ. ತಿರುಗಿ ನೋಡಿದರೆ ಕೆ.ಎಸ್.ನ ಮೈಸೂರು ಮಲ್ಲಿಗೆ ಹಿಡಿದು ನಿಂತಿದ್ದಾರೆ. ಒಳಮನೆಯಲ್ಲಿ ಮತ್ತೇನೋ ಸದ್ದು ಎದ್ದು ನೋಡಿದರೆ ಈ ಕಾರ್ನಾಡರು ಬಿ. ವಿ ಕಾರಂತರೊಂದಿಗೆ ಸೇರಿ ಕೊಂಡು ಸುಬ್ಬಣ್ಣನನ್ನು ಕೂರಿಸಿ ಕೊಂಡು ನಾಟಕ ತಯಾರಿಯಲ್ಲಿದ್ದಾರೆ. ಅಯ್ಯೋ ಕರ್ಮವೇ ಅಂತ ತಿರುಗಿ ರೂಮಿಗೆ ಬಂದರೆ ರೂಮಿನ ತುಂಬೆಲ್ಲಾ ಇಲಿಗಳು ಅಯ್ಯೋ ಶಿವನೇ ಇದೇನು ಗ್ರಹಚಾರ ೆಂದು ಮಿಕಿ ಮಿಕಿ ನೋಡುತ್ತಿದ್ದರೆ ಕಿಂದರಿ ಜೋಗಿಯೊಂದಿಗೆ ನರೆಗೂದಲ ಚೆಲುವ ಕೈಯ್ಯಲ್ಲಿ ರಾಮಾಯಣ ದರ್ಶನಂ ಹಿಡಿದು ಹಾಜರ್. ಸದ್ಯ ಬದುಕುದೆ ಎಂದು ನಟ್ಟುಸಿರು ಬಿಡುತ್ತಾ ಕುಳಿತರೆ ಆದಿ ಪುರಾಣ ಆರಂಭವಾಗುತ್ತೆ, ಅದು ಮುಗಿಯುವಷ್ಟರಲ್ಲಿ ಯಾರದು ಎಂಟೆದೆಯುಳ್ಳವನು ಅಂತ ಬಳೆಗಾರ ಬೇರೆ ಬಾಗಿಲು ಬಡಿಯುತ್ತಿದ್ದಾನೆ. ಎಲಾ ಇವನಾ ಅಂತ ತಿರುಗಿದರೆ ಗಬ್ಬುನಾತದ ಅಷ್ಠಾವಕ್ರ ಹಾಜರಾಗ ಬೇಕೆ ಅವನನ್ನು ಸಾಗ ಹಾಕಿ ಕುಳಿತರೆ ರಗಳೆ ಆರಂಭ. ಅದನ್ನು ಬಗೆಹರಿಸಿ ಉಸ್ಸಪ್ಪಾ ಎನ್ನುವಷ್ಟರಲ್ಲಿ ಈ ಮುದ್ದಣ ಮನೋರಮೆಯರು ಒಬ್ಬರನ್ನೊಬ್ಬರು ಛೇಡಿಸುತ್ತಾ ನನ್ನ ರೂಮಿಗೇ ಬರಬೇಕೇ? ಓಹೋ?! ಇದೇನು ಕರ್ಮ ಮಾರಾಯ್ತಿ ನಾವಿಬ್ಬರು ಸೇರ ಬೇಕಾದ ಈ ರೂಮಿನಲ್ಲಿ ಇವರ್ಯಾರೋ ಬಂದು ಹಾಳು ಮಾಡ್ತಿದ್ದಾರೆ. ಸಾಕಾಗಿ ಹೋಯ್ತು. ಸಂಜೆಯಾಯ್ತು ಇನ್ಯಾರ ಕಾಟವೂ ನನಗಿಲ್ಲ ಅಂತ ಆನಂದ ಪಡುತ್ತಾ ಕೂತರೆ ನರ್ಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯೊಲ್ಸಾಕಿದ್ರೂನೂವೆ ಮೂಗ್ನಲ್ಲಿ ಕನ್ನಡ ಪದವಾಡ್ತೀನಿ ನನ್ನ ಮನಸನ್ನ ನೀ ಕಾಣೆ ಅಂತ ಹೆಂಡ್ಕುಡ್ಕ ಬಡ್ಕೊಳ್ತಿರೋದು ಕೇಳ್ಸುತ್ತೆ. ಿವರನ್ನೆಲ್ಲಾ ಸಂಭಾಳಿಸುವಷ್ಟರಲ್ಲಿ ಈ ರಷ್ಯಾದ ಹುಡುಗರು ದಸ್ತಾಯೇವ್ ಸ್ಕಿ, ತೊಲ್ ಸ್ತಾಯ್, ಗಾರಕಿ ಹಾಜರು. ಸೀಮ್ ದಯವಿಟ್ಟು ಬೇಗ ಬಂದು ನನ್ನನ್ನ ಿವರೆಲ್ಲರಿಂದ ಪಾರು ಮಾಡು. ನಿನಗೆ ಮಾತ್ರಾನೇ ಇವರು ಹೆದರೋದು. ನೀನು ಈ ರೂಮಿಗೆ ಬಂದ್ರೆ ಇವ್ರೆಲ್ಲಾ ಗಂಟು ಮೂಟೆ ಕಟ್ತಾರೆ ಬೇಗ ಬಾ ನನ್ನನ್ನು ಕಾಪಾಡು ನಿನಗೆ ಪುಣ್ಯ ಬರುತ್ತೆ......

Thursday, June 12, 2008

ನಾಚಿಕೆಯ ಬಗ್ಗೆ........

ಮೊನ್ನೆ ನಿನ್ನೊಂದಿಗೆ ಮಾತಾಡುವಾಗ ನಾಚಿಕೆಯ ಪ್ರಸ್ತಾಪವಾಗಿದ್ದು ನಿನಗೆ ನೆನಪಿರ ಬಹುದು. ಅದರ ಬಗ್ಗೆ ಯೋಚಿಸುತ್ತಿದ್ದೇನೆ, ನೀನು ಅಂದು ಹೇಳಿದ್ದು ನಿಜ ಸೀಮ್, ನಾಚಿಕೆಯೆಂಬ ಮೌಲ್ಯ ಕಡಿಮೆಯಾಗಿರುದೇ ಇಂದಿನ ಸಮಾಜದ ಸ್ವಾಸ್ಥ್ಯದ ಹದಗೆಡುವಿಕೆಗೆ ಕಾರಣ. ಇವತ್ತು ಮನುಷ್ಯ ಏನು ಮಾಡಲು ಹೇಸುತ್ತಿಲ್ಲ. ನಾಚಿಕೆ, ಅಂಜಿಕೆ ಮುಂತಾದವುಗಳು ಇಂದು ಮರೆಯಾಗಿತ್ತಿವೆ. ಅವುಗಳ ಜಾಗದಲ್ಲಿ ಮುನ್ನುಗ್ಗುವ ನೆಪದಲ್ಲಿ ಸ್ವೇಚ್ಛೆ, ನಿರ್ಲಜ್ಜತನ ಸ್ಥಾನ ಗಳಿಸಿವೆ. ನಾಚಿಕೆಯೆಂಬುದು ಒಂದು ಮೌಲ್ಯವೆಂಬ ಪರಿಕಲ್ಪನೆಯೇ ಇಲ್ಲವಾಗಿದೆ.ಹಾದರ, ವೈವಾಹಿಕೇತರ ಸಂಬಂಧಗಳು, ಹೀನ ವೃತ್ತಿಗಳು ಇವೆಲ್ಲಕ್ಕೂ ಇದೇ ಮೂಲ ಕಾರಣ ಎನಿಸುತ್ತಿದೆ. "ನಾಚಿಕೆ ಬಿಟ್ಟವರು ಊರಿಗೆ ದೊಡ್ಡವರು" ಎನ್ನೋ ಮಾತು ಇಂದಿನ ದಿನಗಳಲ್ಲಿ ಅಕ್ಷರಶ: ನಿಜವೆನಿಸುತ್ತಿದೆ. ಇತ್ತೀಚೆಗಿನ ಚುನಾವಣೆ, ಈಗಿನ ರಾಜಕೀಯವಂತೂ ಈ ಮಾತಿಗೆ ಅತ್ಯಂತ ಉತ್ತಮವಾದ ಉದಾಹರಣೆಯಾಗಿದೆ. ಅಂದ ಹಾಗೆ ಈಗಿನ ಹುಡುಗಿಯರಲ್ಲೂ ನಾಚಿಕೆಯೆಂಬುದು ವಿರಳವಾಗಿದೆಯೆಂದರೆ ನೀನು ಬೇಸರಿಸುವುದಿಲ್ಲವೆಂದು ಕೊಂಡಿದ್ದೇನೆ.(ಯಾಕಂದ್ರೆ ನಾಚಿಕೆ ಅಂದ್ರೇನು ಅಂತಾನೇ ನಿಂಗೊತ್ತಿಲ್ಲವಲ್ಲ!) ಮುಂದಿನ ದಿನಗಳಲ್ಲಿ ನಾಚಿಕೆಯನ್ನು ಸಿನಿಮಾಗಳಲ್ಲಷ್ಟೇ ನೋಡ ಬೇಕಾಗುತ್ತೇನೋ.......(ಹಾಗಂತ ಹೇಳಿ ನಾನು ಬಂದಾಗ ಅಪ್ಪ ಅಮ್ಮ ಇದ್ದಾರೆ ಅಂತ ನಾಚಿಕೆ ಪಟ್ಕೋ ಬೇಡ ಮಾರಾಯ್ತಿ, ಏಕೇಂದ್ರೆ ಪ್ರಪಂಚದಲ್ಲಿ ನಾಚಿಕೆ ಬಿಡಲು ಹಕ್ಕುಳ್ಳವರೆಂದರೆ ಅದು "ಪ್ರೇಮಿಗಳು" ಮಾತ್ರ.....

Friday, May 23, 2008

ತಪ್ಪು ಮಾಡಿ(?) ಕೊಪ್ಪಕ್ಕೆ ಬಂದು....

ನಾನು ಅಂದು ಬೆಂಗಳೂರಿನ ಸಚಿವಾಲಯದಲ್ಲಿ ನಿಂತಾಗ ಮೊದಲು ಎದುರಾದ ಪ್ರಶ್ನೆ ಏನು ಗೊತ್ತಾ ಹುಡುಗಿ, "ನೀವು ಏನು ತಪ್ಪು ಮಾಡಿದ್ರಿ?" ಅಂತ. ಯಾಕೆಂದು ತಿಳಿಯದೆ ಕಕ್ಕಾ ಬಿಕ್ಕಿಯಾದವನನ್ನು ನೋಡಿ ನಕ್ಕು ಅವರು ನಂತರ ಹೇಳಿದ್ದು " ನೀವು ಕೊಪ್ಪಕ್ಕೆ ಹೋಗ ಬೇಕು. ತಪ್ಪು ಮಾಡ್ದವ್ರನ್ನ ಕೊಪ್ಪಕ್ಕೆ ಕಳ್ಸು ಅನ್ನೋದನ್ನ ನೀವು ಕೇಳಿಲ್ವ" ಅಂತ ನಕ್ರು.

ನವೆಂಬರ್ 2007 ರ ಸಂಜೆ ಕೊಪ್ಪಕ್ಕೆ ಬಂದಿಳಿದೆ. ಮಲೆನಾಡಿನ ಮಡಿಲ ಸಣ್ಣ ಊರು, ಬಯಲು ಸೀಮೆಯಿಂದ ಬಂದ ನನಗೆ ತಾಲ್ಲೂಕು ಕೇಂದ್ರ ಸ್ಥಾನವೆಂದರೆ ಇದ್ದ ಕಲ್ಪನೆ ಕೊಪ್ಪ ನೋಡಿದ ತಕ್ಷಣ ಬದಲಾಯಿತು. ಐದು ಸಾವಿರ ಜನಸಂಖ್ಯೆಯ ಪಟ್ಟಣ. ಸುತ್ತ ಮುತ್ತ ಎತ್ತ ನೋಡಿದರೂ ಬರಿ ಹಸಿರು ತುಂಬಿದ ಬೆಟ್ಟ ಗುಡ್ಡಗಳೇ, ನೀರೇ... ನನಗನ್ನಿಸಿದ್ದು ನಾನಿಲ್ಲಿಗೆ ಪುಣ್ಯ ಮಾಡಿಯೇ ಬಂದಿದ್ದೇನೆ ಅಂತ. ಆರು ತಿಂಗಳು ಕಳೆದು ಹೇಗೆ ಹೋಯಿತು ನೋಡು. ಗೊತ್ತೇ ಆಗಲಿಲ್ಲ. ನಾನೀ ಮಲೆನಾಡನ್ನ ತುಂಬಾ ಎಂಜಾಯ್ ಮಾಡ್ತಾ ಇದ್ದೀನಿ ಹುಡುಗಿ, ಹತ್ತಿರದಲ್ಲಿಯೇ ಕುವೆಂಪುರವರ ಕುಪ್ಪಳ್ಳಿಯಿದೆ, ಬೇಸರವಾದಾಗಲೆಲ್ಲ ಹೋಗಿ ಸಂಜೆಯ ಪಡುವಣದ ಕೆಂಪಿಗೆ ಮುಖ ಮಾಡಿ ಕೂರುತ್ತೇನೆ. ಕಾಡಿನ ಮೌನದ ಮಾತನ್ನ ಆಲಿಸುತ್ತೇನೆ. ಮುಳುಗುವ ಸೂರ್ಯನೊಂದಿಗೆ ನಾನೂ ಮುಳುಗಿ ಹೋಗುತ್ತೇನೆ. ಮತ್ತೆ ಏಳುವುದು ಕತ್ತಲಾದ ಮೇಲೆಯೇ.! ನೀನಿದನ್ನ ಅನುಭವಿಸಲೇ ಬೇಕು ಗೆಳತಿ.ಮೌನದ ನಿಜವಾದ ಅರ್ಥ ನಿನಗಿಲ್ಲಿ ತಳಿಯುತ್ತದೆ. ಬಾ ಗೆಳತಿ ಸುಮ್ಮನೆ ಕೂರೋಣ. ಬಾ ಒಮ್ಮೆ.

ಮುನಿಸು ಮುಗಿದ ನಂತರದ ರಾತ್ರಿ.....

ನೀ ಇದ್ದೆ,
ನಾನೂ ಇದ್ದೆ.
ನಮ್ಮಿಬ್ಬರಿಗೂ ನಿದ್ದೆ.
ನಾ ಎದ್ದೆ,
ನೀನೂ ಎದ್ದೆ,
ಓಹ್......!!!!
ಇನ್ನೆಲ್ಲಿಯ ನಿದ್ದೆ....?!!?

Wednesday, May 21, 2008

ಮುನಿಸು ಮುಗಿದ ಮೇಲೆ ಮತ್ತೆ ಕನಸಿಗೆ ಮರಳುತ್ತಾ......

ನನ್ನ ಮುದ್ದಿನ ಪೆದ್ದು ಮರಿಯೇ, ಮುನಿಸು ಮುಗಿಯಿತಾ? ಯಾಕೆ ಮತ್ತೆ ಕನಸು ಕರೆಯಿತೇನೆ? ಮನಸು ಬೇಸರವ ಮರೆಯಿತೇನೆ?

ಇದೆಲ್ಲಾ ಇದ್ದದ್ದೇ ಬಿಡು.
ಇರಲೇ ಬೇಕು ಕೂಡ,
ಇಲ್ಲಾಂದ್ರೆ ಏನಿರುತ್ತೆ . . . .
ಮುನಿಸಿರ ಬೇಕು
ಆದರೆ ಮನಸು ಮುರಿಯದಂತಿರ ಬೇಕು
ಮತ್ತೆ ಕನಸು ಚಿಗುರುವಂತಿರ ಬೇಕು
ಮುನಿಸು ಮನಸ ಅರಳಿಸ ಬೇಕು
ಒಲವ ಹಳಿಗೆ ಮತ್ತೆ ಮರಳಿಸ ಬೇಕು

Sunday, April 6, 2008

ಯುಗಾದಿ ಬಂದಿದೆ ಬಾ ಹುಡುಗಿ.......

ಎಲ್ಲಾ ಹಬ್ಬಗಳಲ್ಲೂ ನಂಗೆ ಯುಗಾದಿಯೆಂದರೆ ತುಂಬಾ ಇಷ್ಟ. ಯಾಕೆ ಇಸ್ಪೀಟಾಡ್ಲಿಕ್ಕಾ ಅಂತ ಮಾತ್ರ ಕೇಳ್ಬೇಡ, ತೀರಾ ಜೂಜುಕೋರನೇನಲ್ಲ ನಾನು. ಚಿಗುರಿದ ಹಸಿರಿಗೆ, ಅರಳಿದ ಹೂವಿಗೆ, ಗುಂಯ್ ಗುಡುವ ದುಂಬಿಗಳ ದಾಳಿಗೀಡಾದ ಹೊಂಗೆಯ ಹೂವಿನ ಚೆಲುವಿಗೆ, ಬೇವಿನ ಹೂವ ಸಿಹಿ ಕಹಿಗೆ, ಪ್ರಕೃತಿಯ ನವ ಹುಟ್ಟಿಗೆ.......... ಹೀಗೆ ಇವೆಲ್ಲದಕ್ಕೂ ಸಾಕ್ಷಿಯಾಗುವ ಈ ಯುಗಾದಿಯೆಂದರೆ ನನಗಿಷ್ಟ.

ನಿನಗ್ಗೊತ್ತಾ ಹುಡುಗಿ ನಮ್ಮೂರಲ್ಲಿ ಯುಗಾದೀನ ಹೇಗೆ ಆಚರಿಸ್ತೀವಿ ಅಂತ..? ಊರು ಬಿಟ್ಟು ಎಲ್ಲೆಲ್ಲಿಯೋ ಹೋದವರಲ್ಲಾ ಯುಗಾದಿಗೆ ಮರಳಿ ಬಂದೇ ಬರ್ತಾರೆ, ಯುಗಾದಿಯ ಹಿಂದಿನ ರಾತ್ರಿಯೇ ನಮ್ಮೂರ ತುಂಬೆಲ್ಲಾ ಕುದಿವ ಎಣ್ಣೆಯ ಕಮಟು ಮೂಗಿಗಡರುತ್ತೆ. ರಾತ್ರಿಯಿಡೀ ಹೆಂಗಸರು ಕರಿಗಡುಬು ಮಾಡ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಅಭ್ಯಂಜನ, ನಂತರ ತೋರಣದ ತಯಾರಿ, ಮಾವು ಬೇವು ಪ್ರಧಾನ. ನಂತರ ಹತ್ತಿರದ ದೇವರ ಭೇಟಿ(ಕುಶಲೋಪರಿ ವಿಚಾರಿಸಲಿಕ್ಕಲ್ಲ. ಆದರೂ ಅದರಲ್ಲಿ ಎಷ್ಟೋ ದೇವರು ಅಂದು ಮಾತ್ರವೇ ಪೂಜೆ ಕಾಣುವ ಭಾಗ್ಯ ಪಡೆದಿರುವುದು ಎಂಬುದೂ ಸುಳ್ಳಲ್ಲ). ಇನ್ನೊಂದು ವಿಷ್ಯಾ ಗೊತ್ತಾ? ಆವತ್ತು ಮಧ್ಯಾಹ್ನ ನಮ್ಮೂರ ದಾಸಯ್ಯ ಬಂದು ಮನೆಯಲ್ಲಿ ಗೋವಿಂದ ಎನ್ನುವವರೆಗೂ ನಾವು ಊಟ ಮಾಡುವಂತಿಲ್ಲ. ಅದಕ್ಕೆ ಎಷ್ಟೋ ಜನ ದೇವರಿಗೆ ಹೋಗುವದುಂಟು; ಯಾಕೆಂದರೆ ಅಲ್ಲಿ ದೇವರ ಎಡೆಯ ಪ್ರಸಾದವಾದರು ಸಿಗುತ್ತಲ್ಲ. ಅದೂ ಅಲ್ಲದೇ ಊರವರೆಲ್ಲರೂ ಅಲ್ಲಿಗೆ ಬರುವುದರಿಂದ ಬಗೆಬಬಗೆಯ ಭಕ್ಷ್ಯ ಭೋಜ್ಯಗಳು......

ಎರಡು ದಿನಗಳ ನಡುವಿನ ಯಾರಿಗೂ ಸೇರದ ಸಮಯದಲ್ಲಿ......

ನಿಂಗೆ ಗೊತ್ತಲ್ಲ ಹುಡುಗಿ ಎರಡು ದೇಶಗಳ ನಡುವೆ ಯಾರಿಗೂ ಸೇರದ ಜಾಗವಿರುತ್ತೆ, ಅದನ್ನ ನೋ ಮ್ಯಾನ್ಸ್ ಲ್ಯಾಂಡ್ ಅಂತ ಕರೀತಾರೆ. ಆದರೆ ನೋಡು ಹುಡುಗಿ ಎರಡು ದಿನಗಳ ಮಧ್ಯೆ ಮಾತ್ರ ಅಂತಹ ಯಾರಿಗೂ ಸೇರದ ಸಮಯವೆಂಬುದಿಲ್ಲ. ರಾತ್ರಿ ಹನ್ನೆರಡು ಮುಗಿದಾಕ್ಷಣ ಮತ್ತೊಂದು ದಿನವಂತೆ. ಯಾವನು ಮಾಡಿದನೋ ಇದನ್ನ, ತಲೆಯಿಲ್ಲದವನು. ಅಂತಹುದೊಂದು ಇದ್ದಿದ್ದರೆ ನಾವಿಬ್ಬರು ಯಾವುದೂ, ಯಾರದೂ ಭಯವಿಲ್ಲದೆ ಸೇರ ಬಹುದಿತ್ತು. ನಾನು ನಿನ್ನೀ ಮುನಿಸನ್ನ ಮರೆಸಿ, ರಮಿಸ ಬಹುದಿತ್ತು. ಈಗ ಏನಾಗಿದೆ ನೋಡು; ಒಬ್ಬನೇ ಕೂತು ಹೂತು ಹೋಗಿದ್ದೇನೆ, ಗಡಿಯಾರದ ಮುಳ್ಳಿನೊಳಗೆ. ಹನ್ನೆರಡು, ಮತ್ತೆರಡು......... ಗಡಿಯಾರದ ಮುಳ್ಳಿನ ಎಡೆಬಿಡದ ಟಿಕ್ ಟಿಕ್.... ಅದ್ಯಾವುದೋ ವಿರಹಿ ಜೀರುಂಡೆಯ ಶೋಕದ ಸಂಗೀತ, ಇದರೊಂದಿಗೆ ಅದ್ಯಾರೋ ಮುಖೇಶನಂತೆ, ಕಿಶೋರನಂತೆ...... ಅವರು ಹಾಡಿದ ಹಾಡುಗಳಂತೆ. ಸಾಕಲ್ಲ ಈ ಒಂದು ಹಿಡಿ ಹಾಡು ಒಂದಿಡೀ ರಾತ್ರಿ ಕಳೆಯಲು. ಓಹೋ..! ಹೆಚ್ಚಾಯಿತು..! ಸಾಕು ಅಷ್ಟು ಸಾಕು.

ಅನುಭವಿಸಲೇ ಬೇಕು ನಾನು ಇದನ್ನೆಲ್ಲಾ, ನಿನಗೆ ನನ್ನ ಮೇಲೆ ಓಹ್! ನಿನಗೇನು ನನಗೇ ನನ್ನ ಮೇಲೆ ನಂಬಿಕೆಯಿಲ್ಲ. ಮಾತಾಡು ಎಂದರೆ ಏನನ್ನು ತಾನೇ ಮಾತಾಡಿಯೇನು? ಬರೀ ಅರ್ಥವಿಲ್ಲದ ಮಾತುಗಳು. ಬರೀ ಒಣ ಮಾತುಗಳು....... ಹೌದು ಹುಡುಗಿ ನನ್ನವೆಲ್ಲಾ ಅರ್ಥವಿಲ್ಲದ ಮಾತುಗಳು..........................

ಖಾಲಿ ಹುಡುಗಿ ನಾನೀಗ ಖಾಲಿ ಖಾಲಿ......... ಏನೂ ಉಳಿದಿಲ್ಲ ನನ್ನಲ್ಲೀಗ ಏನೆಂದರೆ ಏನೂ ಉಳಿದಿಲ್ಲ, ಬರೀ ಟೊಳ್ಳು.... ಪೊಳ್ಳು.

ಏನನ್ನು ತಾನೇ ಮಾತಾಡಿಯೇನು ಹೇಳು..?!!!!
ಏನೂ ಇಲ್ಲ ಹುಡುಗಿ ನನ್ನಲ್ಲೀಗ ಏನೂ ಉಳಿದಿಲ್ಲ
ನಿನ್ನ ಮೇಲಿನ ಪ್ರೀತಿಯ ಹೊರತು....!!!!!!!!!!!!!!!

Tuesday, April 1, 2008

ನೀನು ಬಂದೆ......

ಇದ್ದೆ ನಾನು ಸುಮ್ಮನೇ, ಒಬ್ಬನೇ.....
ಹೌದು ಇದ್ದೆ ಒಬ್ಬನೇ......
ಯಾರೂ ಇರಲಿಲ್ಲ ನನ್ನ ಮನದಲ್ಲಿ......
ಬರಡು ಬಿದ್ದಿತ್ತು.....
ಕೊರಡು ಕೊನರುವಂತಿರಲಿಲ್ಲ.....
ಒರತೆ ಮತ್ತೆ ೊರೆಯುವಂತಿರಲಿಲ್ಲ....
ಇದ್ದೆ ನಾನು ನನ್ನ ಪಾಡಿಗೆ.....

ಬಂದೆಯಲ್ಲ ನೀನು ನನ್ನ ಹಾದಿಗೆ....
ಮುಂದೆ ನನ್ನ ಹಾಡಿಗೆ....
ಏನು ಕಂಡಿದ್ದೆಯೇ ಹುಡುಗಿ ಈ ಬರ ಬಿದ್ದ ಎದೆಯಲ್ಲಿ.....

ಮುಂದೆ....

ಓಹ್...
ಕೊರಡೂ ಕೊನರಿತಲ್ಲಿ...!
ಒರತೆ ತುಂಬಿ ತುಳುಕಿತಲ್ಲಿ....!
ಬತ್ತಿದ ನದಿ ಉಕ್ಕಿ ಹರಿಯಿತಿಲ್ಲಿ....!
ಎಂತಹ ಮಾಟಗಾತಿಯೆ ನೀನು...?!
ಎಲ್ಲಿ ಕಲಿತೆ ಈ ವಿದ್ಯೆ....?!
ಓಹ್.....

ನಿಂಗೊತ್ತಾ....

ನಿಂಗೊತ್ತಾ ಹುಡುಗಿ, ನಾನು ಹೀಗೆ ನಿನ್ನನ್ನುದ್ದೇಶಿಸಿ ಹೀಗೆ ಈ ಬ್ಲಾಗಿನಲ್ಲಿ ಮಾತಾಡ್ತಾ ಹೋಗ್ತಿರೋದು? ಗೊತ್ತಿರ್ಲಿಕ್ಕಿಲ್ಲ ಅಲ್ವಾ? ಗೊತ್ತಾಗೋದು ಬೇಡ ಬಿಡು:
ನಿನಗೀಗ ನನ್ನ ಮೇಲೆ ಬೇಸರ..........
ಸರಿಯಲಿ ಈ ಬೇಸರದ ನೇಸರ......
ಅರಳಲಿ ಮತ್ತೆ ಒಲವ ಚಂದಿರ......
ಅಲ್ಲಿಯವರೆಗೆ ಹೀಗೇ ನಡೆಯತ್ತಿರುತ್ತೇನೆ ಈಗೇಕೆ, ಅವಸರ....