ಹಾಯ್ ಈ ಜಿಟಿ ಜಿಟಿ ಮಳೆಗಿಂತಲೂ ಮನದೊಳಗೆ ಜಿಟಿ ಜಿಟಿ ಅನ್ನುವ ಮುಂಗಾರು ಮಳೆಯಂತಹವಳೇ, ಹೇಗಿದ್ದೀಯ! ನಿನಗೇನು ಚೆನ್ನಾಗೇ ಇರ್ತೀಯ ನಾನ್ತಾನೇ ಇಲ್ಲಿ ನಿನ್ನ ನೆನಪಲ್ಲಿ ಸಾಯುವವನು. ಕರುಣೆಯಿಲ್ಲದ ಕಟುಕಿಯೇ ಏಕೆ ಹೀಗೆ ನನ್ನೆದೆಯಲ್ಲಿ ಕುಟುಕುತ್ತೀಯೇ? ಚುಟುಕು ಪ್ರೀತಿಯೂ ಇಲ್ಲದವಳು. ಇರಲಿ ಬಿಡು ಏನು ಮಾಡಲಿಕ್ಕಾಗುತ್ತೆ, ಬಯಸಿ ಬಯಸಿ ಪಡೆದದ್ದಲ್ಲವೇ? ಅನುಭವಿಸ ಬೇಕು. ಯಾವ ಜನ್ಮದ ಕರ್ಮ ೀ ಜನ್ಮದಲಿ ಬಂದು ನಮ್ಮಿಬ್ಬರನು ಹೀಗೆ ಬಂದಿಸಿಹುದೋ ಕಾಣೆ. ಓ ಕೆ, ಓ ಕೆ. ಸಾರಿ ಸರೀನಾ? ಇವತ್ತು ಬೇರೇನೋ ಮಾತಾಡ್ಲಿಕ್ಕಂತ ಕುತವನು ನಿನ್ನ ಮೇಲಿನ ಸಿಟ್ಟಿಗೆ ಬೇರೇನೇನೋ ಮಾತಾಡ್ತಾ ಕೂತೆ. ಸರಿ ವಿಷಯಕ್ಕೆ ಬರ್ತೀನಿ ಸೀಮ್ ಬೆಳಿಗ್ಗೆಯಿಂದ ಒಬ್ಬನೇ ಇದ್ದೇನೆ ಈ ಮನೆಯಲ್ಲಿ ಒಂದು ನರ ಪ್ರಾನಿಯ ಸದ್ದೂ ಇಲ್ಲ. ಜಿಟಿ ಜಿಟಿ ಮಳೆ, ಅಲ್ಲೆಲ್ಲೋ ಕೂಗುವ ಹಕ್ಕಿಗಳ ದನಿ, ಬಿಟ್ಟರೆ ನಾನೊಬ್ಬನೇ. ಈ ಒಂಟಿತನವಿದೆಯಲ್ಲ ಸುಮ್ಮನಿದ್ದರೆ ನಮ್ಮನ್ನೇ ಕೊಲ್ಲುತ್ತದೆ, ಅದಕ್ಕೇ ನಾನೀ ಒಂಟಿತನವನ್ನ ಸುಂದರ ಏಕಾಂತವನ್ನಾಗಿ ಬದಲಾಯಿಸಿ ಕೊಳ್ಳುತ್ತೇನೆ. ನಿನಗೆ ಗೊತ್ತಾ ನಾನೀ ಏಕಾಂತದಲ್ಲಿದ್ದಾಗ ತೇಜಸ್ವಿ ಬಂದು ನನ್ನೊಟ್ಟಿಗೆ ಕೂರುತ್ತಾರೆ, ಮಂದಣ್ಣ, ಕರ್ವಾಲೋ, ಪೀರನೊಂದಿಗೆ. ಕಲ್ಲು ಕರಗುವ ಸಮಯದಲ್ಲೂ ಲಂಕೇಶ್ ಬಂದು ಬೇಸರ ಕಳೆಯತ್ತಾರೆ. ಅಯ್ಯೋ ಈ ಸಿಟ್ಟಿನ ಮೂಕಜ್ಜಿಯ ಮುದುಕನ ಕಾಟ ಅಳಿದ ಮೇಲೂ ತಪ್ಪಲ್ಲ. ಮರಳಿ ಮಣ್ಣಿಗೆ ಬರ್ತೇನೆ ಅಂತ ಹಠ ಹಿಡೀತಾನೆ, ಅದೆಂತಹಾ ಜೀವನ ಪ್ರೀತಿಯೋ ಈತನದ್ದು! ಹಾಗೆಯೇ ನಿನ್ನ ನೆನಪಾಗುತ್ತೆ, ಹಾಗೆಯೇ ಎಲ್ಲೋಮೂಲೆಯಿಂದ ಮಲ್ಲಿಗೆಯ ಘಮ ಮೂಗುಗಡರುತ್ತೆ. ತಿರುಗಿ ನೋಡಿದರೆ ಕೆ.ಎಸ್.ನ ಮೈಸೂರು ಮಲ್ಲಿಗೆ ಹಿಡಿದು ನಿಂತಿದ್ದಾರೆ. ಒಳಮನೆಯಲ್ಲಿ ಮತ್ತೇನೋ ಸದ್ದು ಎದ್ದು ನೋಡಿದರೆ ಈ ಕಾರ್ನಾಡರು ಬಿ. ವಿ ಕಾರಂತರೊಂದಿಗೆ ಸೇರಿ ಕೊಂಡು ಸುಬ್ಬಣ್ಣನನ್ನು ಕೂರಿಸಿ ಕೊಂಡು ನಾಟಕ ತಯಾರಿಯಲ್ಲಿದ್ದಾರೆ. ಅಯ್ಯೋ ಕರ್ಮವೇ ಅಂತ ತಿರುಗಿ ರೂಮಿಗೆ ಬಂದರೆ ರೂಮಿನ ತುಂಬೆಲ್ಲಾ ಇಲಿಗಳು ಅಯ್ಯೋ ಶಿವನೇ ಇದೇನು ಗ್ರಹಚಾರ ೆಂದು ಮಿಕಿ ಮಿಕಿ ನೋಡುತ್ತಿದ್ದರೆ ಕಿಂದರಿ ಜೋಗಿಯೊಂದಿಗೆ ನರೆಗೂದಲ ಚೆಲುವ ಕೈಯ್ಯಲ್ಲಿ ರಾಮಾಯಣ ದರ್ಶನಂ ಹಿಡಿದು ಹಾಜರ್. ಸದ್ಯ ಬದುಕುದೆ ಎಂದು ನಟ್ಟುಸಿರು ಬಿಡುತ್ತಾ ಕುಳಿತರೆ ಆದಿ ಪುರಾಣ ಆರಂಭವಾಗುತ್ತೆ, ಅದು ಮುಗಿಯುವಷ್ಟರಲ್ಲಿ ಯಾರದು ಎಂಟೆದೆಯುಳ್ಳವನು ಅಂತ ಬಳೆಗಾರ ಬೇರೆ ಬಾಗಿಲು ಬಡಿಯುತ್ತಿದ್ದಾನೆ. ಎಲಾ ಇವನಾ ಅಂತ ತಿರುಗಿದರೆ ಗಬ್ಬುನಾತದ ಅಷ್ಠಾವಕ್ರ ಹಾಜರಾಗ ಬೇಕೆ ಅವನನ್ನು ಸಾಗ ಹಾಕಿ ಕುಳಿತರೆ ರಗಳೆ ಆರಂಭ. ಅದನ್ನು ಬಗೆಹರಿಸಿ ಉಸ್ಸಪ್ಪಾ ಎನ್ನುವಷ್ಟರಲ್ಲಿ ಈ ಮುದ್ದಣ ಮನೋರಮೆಯರು ಒಬ್ಬರನ್ನೊಬ್ಬರು ಛೇಡಿಸುತ್ತಾ ನನ್ನ ರೂಮಿಗೇ ಬರಬೇಕೇ? ಓಹೋ?! ಇದೇನು ಕರ್ಮ ಮಾರಾಯ್ತಿ ನಾವಿಬ್ಬರು ಸೇರ ಬೇಕಾದ ಈ ರೂಮಿನಲ್ಲಿ ಇವರ್ಯಾರೋ ಬಂದು ಹಾಳು ಮಾಡ್ತಿದ್ದಾರೆ. ಸಾಕಾಗಿ ಹೋಯ್ತು. ಸಂಜೆಯಾಯ್ತು ಇನ್ಯಾರ ಕಾಟವೂ ನನಗಿಲ್ಲ ಅಂತ ಆನಂದ ಪಡುತ್ತಾ ಕೂತರೆ ನರ್ಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯೊಲ್ಸಾಕಿದ್ರೂನೂವೆ ಮೂಗ್ನಲ್ಲಿ ಕನ್ನಡ ಪದವಾಡ್ತೀನಿ ನನ್ನ ಮನಸನ್ನ ನೀ ಕಾಣೆ ಅಂತ ಹೆಂಡ್ಕುಡ್ಕ ಬಡ್ಕೊಳ್ತಿರೋದು ಕೇಳ್ಸುತ್ತೆ. ಿವರನ್ನೆಲ್ಲಾ ಸಂಭಾಳಿಸುವಷ್ಟರಲ್ಲಿ ಈ ರಷ್ಯಾದ ಹುಡುಗರು ದಸ್ತಾಯೇವ್ ಸ್ಕಿ, ತೊಲ್ ಸ್ತಾಯ್, ಗಾರಕಿ ಹಾಜರು. ಸೀಮ್ ದಯವಿಟ್ಟು ಬೇಗ ಬಂದು ನನ್ನನ್ನ ಿವರೆಲ್ಲರಿಂದ ಪಾರು ಮಾಡು. ನಿನಗೆ ಮಾತ್ರಾನೇ ಇವರು ಹೆದರೋದು. ನೀನು ಈ ರೂಮಿಗೆ ಬಂದ್ರೆ ಇವ್ರೆಲ್ಲಾ ಗಂಟು ಮೂಟೆ ಕಟ್ತಾರೆ ಬೇಗ ಬಾ ನನ್ನನ್ನು ಕಾಪಾಡು ನಿನಗೆ ಪುಣ್ಯ ಬರುತ್ತೆ......
No comments:
Post a Comment