Sunday, April 6, 2008

ಎರಡು ದಿನಗಳ ನಡುವಿನ ಯಾರಿಗೂ ಸೇರದ ಸಮಯದಲ್ಲಿ......

ನಿಂಗೆ ಗೊತ್ತಲ್ಲ ಹುಡುಗಿ ಎರಡು ದೇಶಗಳ ನಡುವೆ ಯಾರಿಗೂ ಸೇರದ ಜಾಗವಿರುತ್ತೆ, ಅದನ್ನ ನೋ ಮ್ಯಾನ್ಸ್ ಲ್ಯಾಂಡ್ ಅಂತ ಕರೀತಾರೆ. ಆದರೆ ನೋಡು ಹುಡುಗಿ ಎರಡು ದಿನಗಳ ಮಧ್ಯೆ ಮಾತ್ರ ಅಂತಹ ಯಾರಿಗೂ ಸೇರದ ಸಮಯವೆಂಬುದಿಲ್ಲ. ರಾತ್ರಿ ಹನ್ನೆರಡು ಮುಗಿದಾಕ್ಷಣ ಮತ್ತೊಂದು ದಿನವಂತೆ. ಯಾವನು ಮಾಡಿದನೋ ಇದನ್ನ, ತಲೆಯಿಲ್ಲದವನು. ಅಂತಹುದೊಂದು ಇದ್ದಿದ್ದರೆ ನಾವಿಬ್ಬರು ಯಾವುದೂ, ಯಾರದೂ ಭಯವಿಲ್ಲದೆ ಸೇರ ಬಹುದಿತ್ತು. ನಾನು ನಿನ್ನೀ ಮುನಿಸನ್ನ ಮರೆಸಿ, ರಮಿಸ ಬಹುದಿತ್ತು. ಈಗ ಏನಾಗಿದೆ ನೋಡು; ಒಬ್ಬನೇ ಕೂತು ಹೂತು ಹೋಗಿದ್ದೇನೆ, ಗಡಿಯಾರದ ಮುಳ್ಳಿನೊಳಗೆ. ಹನ್ನೆರಡು, ಮತ್ತೆರಡು......... ಗಡಿಯಾರದ ಮುಳ್ಳಿನ ಎಡೆಬಿಡದ ಟಿಕ್ ಟಿಕ್.... ಅದ್ಯಾವುದೋ ವಿರಹಿ ಜೀರುಂಡೆಯ ಶೋಕದ ಸಂಗೀತ, ಇದರೊಂದಿಗೆ ಅದ್ಯಾರೋ ಮುಖೇಶನಂತೆ, ಕಿಶೋರನಂತೆ...... ಅವರು ಹಾಡಿದ ಹಾಡುಗಳಂತೆ. ಸಾಕಲ್ಲ ಈ ಒಂದು ಹಿಡಿ ಹಾಡು ಒಂದಿಡೀ ರಾತ್ರಿ ಕಳೆಯಲು. ಓಹೋ..! ಹೆಚ್ಚಾಯಿತು..! ಸಾಕು ಅಷ್ಟು ಸಾಕು.

ಅನುಭವಿಸಲೇ ಬೇಕು ನಾನು ಇದನ್ನೆಲ್ಲಾ, ನಿನಗೆ ನನ್ನ ಮೇಲೆ ಓಹ್! ನಿನಗೇನು ನನಗೇ ನನ್ನ ಮೇಲೆ ನಂಬಿಕೆಯಿಲ್ಲ. ಮಾತಾಡು ಎಂದರೆ ಏನನ್ನು ತಾನೇ ಮಾತಾಡಿಯೇನು? ಬರೀ ಅರ್ಥವಿಲ್ಲದ ಮಾತುಗಳು. ಬರೀ ಒಣ ಮಾತುಗಳು....... ಹೌದು ಹುಡುಗಿ ನನ್ನವೆಲ್ಲಾ ಅರ್ಥವಿಲ್ಲದ ಮಾತುಗಳು..........................

ಖಾಲಿ ಹುಡುಗಿ ನಾನೀಗ ಖಾಲಿ ಖಾಲಿ......... ಏನೂ ಉಳಿದಿಲ್ಲ ನನ್ನಲ್ಲೀಗ ಏನೆಂದರೆ ಏನೂ ಉಳಿದಿಲ್ಲ, ಬರೀ ಟೊಳ್ಳು.... ಪೊಳ್ಳು.

ಏನನ್ನು ತಾನೇ ಮಾತಾಡಿಯೇನು ಹೇಳು..?!!!!
ಏನೂ ಇಲ್ಲ ಹುಡುಗಿ ನನ್ನಲ್ಲೀಗ ಏನೂ ಉಳಿದಿಲ್ಲ
ನಿನ್ನ ಮೇಲಿನ ಪ್ರೀತಿಯ ಹೊರತು....!!!!!!!!!!!!!!!

No comments: