Friday, September 12, 2008

ಬರಿ ಗಾಲು ಮತ್ತು ಚಪ್ಪಲಿ

ಈವತ್ತು ಯಾಕೋ ಕಾಲಿನ ಕಡೆ ನೋಡ್ತಾ ಇರುವಾಗ ಯಾಕೋ ಬೆತ್ತಲೆ ಪಾದಗಳು ನೆನಪಾದವು. ಹೌದಲ್ಲಾ ಬರಿ ಗಾಲಲ್ಲಿ ನಡೆದು ಎಷ್ಟೊಂದು ದಿನವಾಯ್ತಲ್ಲ ಅಂದು ಅಂದು ಕೊಂಡವನು ಚಪ್ಪಲಿ ಬಿಟ್ಟು ಬರಿಗಾಲ್ಲಿ ನಡೆದೆ. ಮೊದಲು ಮಣ್ಣು ಕೂಡ ಚುಚ್ಚಿದಂತೆನಿಸಿದರೂ ನಂತರ ಹೊಂದಿ ಕೊಂಡೆ. ಮಣ್ಣು, ಕೆಸರು, ಮಳೆಯ ನೀರಿನ ತಂಪು, ಹುಲ್ಲಿನ ಕಚಗುಳಿ, ಕಾಣದ ಸಣ್ಣ ಮುಳ್ಳಿನ ಚುಚ್ಚುವಿಕೆ. ಓಹ್! ಎಲ್ಲಾ ಅದೆಷ್ಟು ಹಿತವೆನಿಸಿತು! ಇದನ್ನೆಲ್ಲಾ ಯಾಕೆ ಇಷ್ಟು ದಿನ ಮರೆತೆ ಎಂದು ನನ್ನ ನ್ನೇ ನಾನು ಬಯ್ದು ಕೊಂಡೆ.
ಆ ದಿನಗಳು ಚಪ್ಪಲಿಯಿಲ್ಲದ ಆ ದಿನಗಳು ನೆನಪಾದವು. ಚಪ್ಪಲಿಯಿಲ್ಲದೆ ಮುಳ್ಳು ತುಳಿದಿದ್ದು (ಜಾಲಿ ಮುಳ್ಳು) ನೆನಪಾಯ್ತು. ನಿಂಗೊತ್ತಾ ಈ ಮುಳ್ಳು ಮುರಿತದಲ್ಲೂ ವಿಧಗಳಿವೆ. ಹಸಿ ಜಾಲಿ(ಬಳ್ಳಾರಿ ಜಾಲಿ) ತುಳಿದ್ರೆ ಅದು ಕಾಲಲ್ಲಿ ಮುರಿಯೋದಿಲ್ಲ, ಆದರೆ ಆ ನೋವಿದೆಯಲ್ಲ ಮಾರಾಯ್ತಿ! ಅಬ್ಬಾ ಅದನ್ನ ಅನುಭವಿಸಿಯೇ ತೀರ ಬೇಕು. ಕಾಲು ಎತ್ತಿಡಲೂ ಸಾಧ್ಯವಾಗೋದಿಲ್ಲ ಗೊತ್ತಾ? ಮೂರು ದಿನ ಬೇಕು ಸರಿಯಾಗಿ ಓಡಾಡ್ಲಿಕ್ಕೆ.
ಇನ್ನು ಕೊಳೆತ ಜಾಲಿ ಮುಳ್ಳು ತುಳಿದ್ರಂತೂ ಕರ್ಮ! ಕಾಲಲ್ಲಿ ಮುಳ್ಳು ಮುರಿಯೋದಂತೂ ಗ್ಯಾರಂಟಿ. ಜೊತೆಗೆ ನೋವು ಮತ್ತು ಕಾಲಿಟ್ಟಾಗಲೆಲ್ಲಾ ಈಟಿಯಿಂದ ಅಂಗಾಲಿಗೆ ಚುಚ್ಚಿದಂತಹ ಅನುಭವ. ಅನುಭಾವಿಸ ಬೇಕು ಆ ಸ್ವರ್ಗ! ಅದನ್ನ ಬಗೆದು ತೆಗೀಲಿಕ್ಕು ಬರೋದಿಲ್ಲ. ಸ್ವಲ್ಪ ಬಗೆದು ಕಳ್ಳಿ ಅಥವಾ ಎಕ್ಕೆ ಅಥವಾ ಕಿವಿಯಲ್ಲಿನ ಕಸವನ್ನು ತೆಗೆದು ಅಥವಾ ಎಮ್ಮೆ ಸಗಣಿಯನ್ನು ಕಟ್ಟಿ ಅದು ಕೀವಾಗುವುದನ್ನು ಕಾಯ್ದು ಮೂರ್ನಾಲ್ಕು ದಿನ ಕಾದು ಬಗೆದು ತೆಗೆದಾಗ ನಿಜಕ್ಕೂ ಸ್ವರ್ಗ ಸುಖ!
ಅಂದ ಹಾಗೆ ಹೇಳುವುದ ಮರೆತೆ, ಈ ಮುಳ್ಳು ಬಗೆಸಿ ಕೊಳ್ಳೋ ಸುಖ ಇದೆಯಲ್ಲಾ ಎಂತಾ ಮಜ ಗೊತ್ತಾ? ಬಗೆಯುವವರ ಕೈಯ್ಯಲ್ಲಿ ಕಾಲು ಕೊಟ್ಟು ಹಲ್ಲು ಕಚ್ಚಿ ಹಿಡಿದು(ಒಮ್ಮೊಮ್ಮೆ ಬಟ್ಟೆ ಕಚ್ಚಿ) ಬಗೆಸಿ ಕೊಳ್ಳೋದು ಓಹ್! ಮಸ್ತ್ ಮಾರಾಯ್ತಿ.

ಹಾಗೆಯೇ ಮುಳ್ಳು ಬಗೆಯೋದು ಕೂಡ ಒಂದು ಕಲೆ ಗೊತ್ತಾ? ಮುಳ್ಳು ಹೊಕ್ಕವರ ಗಮನವನ್ನ ಬೇರೆಡೆಗೆ ತಿರುಗಿಸಿ ನಿಧಾನಕ್ಕೆ ಬಗೀಬೇಕು. ಮುಳ್ಳು ಬಗೆಯಲು ಬಳಸುವ ಸಾಧನಗಳಲ್ಲೂ ವೈವಿಧ್ಯತೆಯಿದೆ. ಮುಳ್ಳು(ಮುಳ್ಳನ್ನ ಮುಳ್ಳಿನಿಂದಲೇ ತೆಗೀ ಬೇಕಲ್ಲ), ಸೂಜಿ, ಪಿನ್ನು, ಮುಳ್ಳಗಡ್ಡಿ ಹೀಗೇ.

ಆ ಅನುಭವಗಳೇ ಅಂತಹವು. ಕಾಲ ತುಂಬೆಲ್ಲಾ ತೂತುಗಳೇ ಇರ್ತಿದ್ದವು! ಈಗ ಬರೀ ಗಾಲು. ನುಣ್ಣನೇ ಖಾಲಿ ಕಾಲು!..!

4 comments:

sunaath said...

ಮುಳ್ಳು ಚುಚ್ಚಿಸಿಕೊಳ್ಳೋದು ಸುಖಾನ ಅಂತೀರಲ್ಲಾ ಮಾರಾಯ್ರೆ! ಹಾಂ, ಹುಡುಗರಿರೋದS ಸುಖದ ಕಾಲ!

ಸಿಮ್ಮಾ said...

ಅದಕ್ಕೆ ಅಲ್ವಾ ಸ್ವಾಮಿ ನಾವು ಯಾವಾಗ್ಲೂ ಬಾಲ್ಯದ ದಿನಗಳನ್ನ ನೆಪಿಸಿಕೊಳ್ಳೋದು!

ಮಾರುತಿ ಜಿ said...

ಔದು ರೀ ನಂಗು ಮುಳ್ಳು ಚುಚ್ಚಿದಾಗ ನಮ್ಮಮ್ಮ ಅದನ್ನು ತೆಗೆಯುವಾಗ ...........ಎಂಥ ಮಜಾ ...
ನನಗೂ ನೆನಪಾಯ್ತು.......... ಅದಕ್ಕೆ ಈ ಸಾರಿ ಊರಿಗೆ ಹೋದಾಗ ...ಮುಳ್ಳು ಚುಚ್ಚಿಸಿಕೊಳ್ತೇನೆ.......

ಸಿಮ್ಮಾ said...

ಧನ್ಯವಾದ ಮಾರುತಿಯವರೇ . ಆಗಾಗ ಬನ್ನಿ.