Friday, May 23, 2008

ತಪ್ಪು ಮಾಡಿ(?) ಕೊಪ್ಪಕ್ಕೆ ಬಂದು....

ನಾನು ಅಂದು ಬೆಂಗಳೂರಿನ ಸಚಿವಾಲಯದಲ್ಲಿ ನಿಂತಾಗ ಮೊದಲು ಎದುರಾದ ಪ್ರಶ್ನೆ ಏನು ಗೊತ್ತಾ ಹುಡುಗಿ, "ನೀವು ಏನು ತಪ್ಪು ಮಾಡಿದ್ರಿ?" ಅಂತ. ಯಾಕೆಂದು ತಿಳಿಯದೆ ಕಕ್ಕಾ ಬಿಕ್ಕಿಯಾದವನನ್ನು ನೋಡಿ ನಕ್ಕು ಅವರು ನಂತರ ಹೇಳಿದ್ದು " ನೀವು ಕೊಪ್ಪಕ್ಕೆ ಹೋಗ ಬೇಕು. ತಪ್ಪು ಮಾಡ್ದವ್ರನ್ನ ಕೊಪ್ಪಕ್ಕೆ ಕಳ್ಸು ಅನ್ನೋದನ್ನ ನೀವು ಕೇಳಿಲ್ವ" ಅಂತ ನಕ್ರು.

ನವೆಂಬರ್ 2007 ರ ಸಂಜೆ ಕೊಪ್ಪಕ್ಕೆ ಬಂದಿಳಿದೆ. ಮಲೆನಾಡಿನ ಮಡಿಲ ಸಣ್ಣ ಊರು, ಬಯಲು ಸೀಮೆಯಿಂದ ಬಂದ ನನಗೆ ತಾಲ್ಲೂಕು ಕೇಂದ್ರ ಸ್ಥಾನವೆಂದರೆ ಇದ್ದ ಕಲ್ಪನೆ ಕೊಪ್ಪ ನೋಡಿದ ತಕ್ಷಣ ಬದಲಾಯಿತು. ಐದು ಸಾವಿರ ಜನಸಂಖ್ಯೆಯ ಪಟ್ಟಣ. ಸುತ್ತ ಮುತ್ತ ಎತ್ತ ನೋಡಿದರೂ ಬರಿ ಹಸಿರು ತುಂಬಿದ ಬೆಟ್ಟ ಗುಡ್ಡಗಳೇ, ನೀರೇ... ನನಗನ್ನಿಸಿದ್ದು ನಾನಿಲ್ಲಿಗೆ ಪುಣ್ಯ ಮಾಡಿಯೇ ಬಂದಿದ್ದೇನೆ ಅಂತ. ಆರು ತಿಂಗಳು ಕಳೆದು ಹೇಗೆ ಹೋಯಿತು ನೋಡು. ಗೊತ್ತೇ ಆಗಲಿಲ್ಲ. ನಾನೀ ಮಲೆನಾಡನ್ನ ತುಂಬಾ ಎಂಜಾಯ್ ಮಾಡ್ತಾ ಇದ್ದೀನಿ ಹುಡುಗಿ, ಹತ್ತಿರದಲ್ಲಿಯೇ ಕುವೆಂಪುರವರ ಕುಪ್ಪಳ್ಳಿಯಿದೆ, ಬೇಸರವಾದಾಗಲೆಲ್ಲ ಹೋಗಿ ಸಂಜೆಯ ಪಡುವಣದ ಕೆಂಪಿಗೆ ಮುಖ ಮಾಡಿ ಕೂರುತ್ತೇನೆ. ಕಾಡಿನ ಮೌನದ ಮಾತನ್ನ ಆಲಿಸುತ್ತೇನೆ. ಮುಳುಗುವ ಸೂರ್ಯನೊಂದಿಗೆ ನಾನೂ ಮುಳುಗಿ ಹೋಗುತ್ತೇನೆ. ಮತ್ತೆ ಏಳುವುದು ಕತ್ತಲಾದ ಮೇಲೆಯೇ.! ನೀನಿದನ್ನ ಅನುಭವಿಸಲೇ ಬೇಕು ಗೆಳತಿ.ಮೌನದ ನಿಜವಾದ ಅರ್ಥ ನಿನಗಿಲ್ಲಿ ತಳಿಯುತ್ತದೆ. ಬಾ ಗೆಳತಿ ಸುಮ್ಮನೆ ಕೂರೋಣ. ಬಾ ಒಮ್ಮೆ.

1 comment:

Anonymous said...

Hi Mr Simha
Koppa is the place where i learnt Kannada. I have a special place in my heart,for Koppa and its surrounding places.
:-)
Malathi S