ನೋವಿದೆ....ನಿಜ..ಬೇಸರವೂ ಇದೆ.
ಅದಕ್ಕೆಲ್ಲಾ ಕಾರಣವೂ ಇದೆ.
ಅದರ ಮೊಲ ನಾನೆಂದೂ ಗೊತ್ತಿದೆ...
ಆದರೆ... ಗೊತ್ತಿರಲಿ ಹುಡುಗಿ..
ಅದೆಲ್ಲವನ್ನೂ ಮೀರಿದ ಒಲವೂ ನನ್ನಲ್ಲಿದೆ!!
ಗೊತ್ತಿದೆ; ನಿಜ! ನನ್ನಲ್ಲಿ ದ್ವಂದ್ವವಿದೆ,
ಚಂಚಲತೆಯಿದೆ.. ನಾ ದೃಢನಲ್ಲವೆಂದೂ ಗೊತ್ತಿದೆ.
ನಿನ್ನ ನೋವಿಗೆ ನಾನೇ ಕಾರಣವೆಂದೂ ಗೊತ್ತಿದೆ.
ಆದರೆ... ಗೊತ್ತಿರಲಿ ಗೆಳತಿ
ಅದನ್ನೆಲ್ಲಾ ಮೀರಿದ ಅಕ್ಕರೆಯಿದೆ.!!
ನಿನ್ನ ಮೌನದ ಹಿಂದಿನ ನೋವಿನ ಅರಿವಿದೆ.
ನಿನ್ನ ಬೇಸರದ ಹಿಂದಿನ ಒತ್ತಡದ ಒಳಸುಳಿ ತಿಳಿದಿದೆ.
ಅದರ ಬೇರೂ ನನ್ನಲ್ಲಿದೆಯೆಂಬುದೂ ಗೊತ್ತಿದೆ.
ಆದರೆ... ನನ್ನೊಲವೇ...
ಒಮ್ಮೆ ಹಾಗೆಯೇ ನೋಡು..
ಈ ಜೀವನವಿಡೀ ಮೊಗೆದರೂ ಬರಿದಾಗದ ಒಲವ ಒರತೆಯಿದೆ!!!
ಬಯ್ದು ಬಿಡು ಒಮ್ಮೆ..
ರೇಗಿ ಬಿಡು, ಕೂಗಾಡು, ಕಿರುಚಾಡು...
ಮೌನಿಯಾಗ ಬೇಡ..
ದಯವಿಟ್ಟು.... ಗೆಳತಿ..
ಮೌನಿಯಾಗ ಬೇಡ.