Sunday, April 6, 2008

ಯುಗಾದಿ ಬಂದಿದೆ ಬಾ ಹುಡುಗಿ.......

ಎಲ್ಲಾ ಹಬ್ಬಗಳಲ್ಲೂ ನಂಗೆ ಯುಗಾದಿಯೆಂದರೆ ತುಂಬಾ ಇಷ್ಟ. ಯಾಕೆ ಇಸ್ಪೀಟಾಡ್ಲಿಕ್ಕಾ ಅಂತ ಮಾತ್ರ ಕೇಳ್ಬೇಡ, ತೀರಾ ಜೂಜುಕೋರನೇನಲ್ಲ ನಾನು. ಚಿಗುರಿದ ಹಸಿರಿಗೆ, ಅರಳಿದ ಹೂವಿಗೆ, ಗುಂಯ್ ಗುಡುವ ದುಂಬಿಗಳ ದಾಳಿಗೀಡಾದ ಹೊಂಗೆಯ ಹೂವಿನ ಚೆಲುವಿಗೆ, ಬೇವಿನ ಹೂವ ಸಿಹಿ ಕಹಿಗೆ, ಪ್ರಕೃತಿಯ ನವ ಹುಟ್ಟಿಗೆ.......... ಹೀಗೆ ಇವೆಲ್ಲದಕ್ಕೂ ಸಾಕ್ಷಿಯಾಗುವ ಈ ಯುಗಾದಿಯೆಂದರೆ ನನಗಿಷ್ಟ.

ನಿನಗ್ಗೊತ್ತಾ ಹುಡುಗಿ ನಮ್ಮೂರಲ್ಲಿ ಯುಗಾದೀನ ಹೇಗೆ ಆಚರಿಸ್ತೀವಿ ಅಂತ..? ಊರು ಬಿಟ್ಟು ಎಲ್ಲೆಲ್ಲಿಯೋ ಹೋದವರಲ್ಲಾ ಯುಗಾದಿಗೆ ಮರಳಿ ಬಂದೇ ಬರ್ತಾರೆ, ಯುಗಾದಿಯ ಹಿಂದಿನ ರಾತ್ರಿಯೇ ನಮ್ಮೂರ ತುಂಬೆಲ್ಲಾ ಕುದಿವ ಎಣ್ಣೆಯ ಕಮಟು ಮೂಗಿಗಡರುತ್ತೆ. ರಾತ್ರಿಯಿಡೀ ಹೆಂಗಸರು ಕರಿಗಡುಬು ಮಾಡ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಅಭ್ಯಂಜನ, ನಂತರ ತೋರಣದ ತಯಾರಿ, ಮಾವು ಬೇವು ಪ್ರಧಾನ. ನಂತರ ಹತ್ತಿರದ ದೇವರ ಭೇಟಿ(ಕುಶಲೋಪರಿ ವಿಚಾರಿಸಲಿಕ್ಕಲ್ಲ. ಆದರೂ ಅದರಲ್ಲಿ ಎಷ್ಟೋ ದೇವರು ಅಂದು ಮಾತ್ರವೇ ಪೂಜೆ ಕಾಣುವ ಭಾಗ್ಯ ಪಡೆದಿರುವುದು ಎಂಬುದೂ ಸುಳ್ಳಲ್ಲ). ಇನ್ನೊಂದು ವಿಷ್ಯಾ ಗೊತ್ತಾ? ಆವತ್ತು ಮಧ್ಯಾಹ್ನ ನಮ್ಮೂರ ದಾಸಯ್ಯ ಬಂದು ಮನೆಯಲ್ಲಿ ಗೋವಿಂದ ಎನ್ನುವವರೆಗೂ ನಾವು ಊಟ ಮಾಡುವಂತಿಲ್ಲ. ಅದಕ್ಕೆ ಎಷ್ಟೋ ಜನ ದೇವರಿಗೆ ಹೋಗುವದುಂಟು; ಯಾಕೆಂದರೆ ಅಲ್ಲಿ ದೇವರ ಎಡೆಯ ಪ್ರಸಾದವಾದರು ಸಿಗುತ್ತಲ್ಲ. ಅದೂ ಅಲ್ಲದೇ ಊರವರೆಲ್ಲರೂ ಅಲ್ಲಿಗೆ ಬರುವುದರಿಂದ ಬಗೆಬಬಗೆಯ ಭಕ್ಷ್ಯ ಭೋಜ್ಯಗಳು......

ಎರಡು ದಿನಗಳ ನಡುವಿನ ಯಾರಿಗೂ ಸೇರದ ಸಮಯದಲ್ಲಿ......

ನಿಂಗೆ ಗೊತ್ತಲ್ಲ ಹುಡುಗಿ ಎರಡು ದೇಶಗಳ ನಡುವೆ ಯಾರಿಗೂ ಸೇರದ ಜಾಗವಿರುತ್ತೆ, ಅದನ್ನ ನೋ ಮ್ಯಾನ್ಸ್ ಲ್ಯಾಂಡ್ ಅಂತ ಕರೀತಾರೆ. ಆದರೆ ನೋಡು ಹುಡುಗಿ ಎರಡು ದಿನಗಳ ಮಧ್ಯೆ ಮಾತ್ರ ಅಂತಹ ಯಾರಿಗೂ ಸೇರದ ಸಮಯವೆಂಬುದಿಲ್ಲ. ರಾತ್ರಿ ಹನ್ನೆರಡು ಮುಗಿದಾಕ್ಷಣ ಮತ್ತೊಂದು ದಿನವಂತೆ. ಯಾವನು ಮಾಡಿದನೋ ಇದನ್ನ, ತಲೆಯಿಲ್ಲದವನು. ಅಂತಹುದೊಂದು ಇದ್ದಿದ್ದರೆ ನಾವಿಬ್ಬರು ಯಾವುದೂ, ಯಾರದೂ ಭಯವಿಲ್ಲದೆ ಸೇರ ಬಹುದಿತ್ತು. ನಾನು ನಿನ್ನೀ ಮುನಿಸನ್ನ ಮರೆಸಿ, ರಮಿಸ ಬಹುದಿತ್ತು. ಈಗ ಏನಾಗಿದೆ ನೋಡು; ಒಬ್ಬನೇ ಕೂತು ಹೂತು ಹೋಗಿದ್ದೇನೆ, ಗಡಿಯಾರದ ಮುಳ್ಳಿನೊಳಗೆ. ಹನ್ನೆರಡು, ಮತ್ತೆರಡು......... ಗಡಿಯಾರದ ಮುಳ್ಳಿನ ಎಡೆಬಿಡದ ಟಿಕ್ ಟಿಕ್.... ಅದ್ಯಾವುದೋ ವಿರಹಿ ಜೀರುಂಡೆಯ ಶೋಕದ ಸಂಗೀತ, ಇದರೊಂದಿಗೆ ಅದ್ಯಾರೋ ಮುಖೇಶನಂತೆ, ಕಿಶೋರನಂತೆ...... ಅವರು ಹಾಡಿದ ಹಾಡುಗಳಂತೆ. ಸಾಕಲ್ಲ ಈ ಒಂದು ಹಿಡಿ ಹಾಡು ಒಂದಿಡೀ ರಾತ್ರಿ ಕಳೆಯಲು. ಓಹೋ..! ಹೆಚ್ಚಾಯಿತು..! ಸಾಕು ಅಷ್ಟು ಸಾಕು.

ಅನುಭವಿಸಲೇ ಬೇಕು ನಾನು ಇದನ್ನೆಲ್ಲಾ, ನಿನಗೆ ನನ್ನ ಮೇಲೆ ಓಹ್! ನಿನಗೇನು ನನಗೇ ನನ್ನ ಮೇಲೆ ನಂಬಿಕೆಯಿಲ್ಲ. ಮಾತಾಡು ಎಂದರೆ ಏನನ್ನು ತಾನೇ ಮಾತಾಡಿಯೇನು? ಬರೀ ಅರ್ಥವಿಲ್ಲದ ಮಾತುಗಳು. ಬರೀ ಒಣ ಮಾತುಗಳು....... ಹೌದು ಹುಡುಗಿ ನನ್ನವೆಲ್ಲಾ ಅರ್ಥವಿಲ್ಲದ ಮಾತುಗಳು..........................

ಖಾಲಿ ಹುಡುಗಿ ನಾನೀಗ ಖಾಲಿ ಖಾಲಿ......... ಏನೂ ಉಳಿದಿಲ್ಲ ನನ್ನಲ್ಲೀಗ ಏನೆಂದರೆ ಏನೂ ಉಳಿದಿಲ್ಲ, ಬರೀ ಟೊಳ್ಳು.... ಪೊಳ್ಳು.

ಏನನ್ನು ತಾನೇ ಮಾತಾಡಿಯೇನು ಹೇಳು..?!!!!
ಏನೂ ಇಲ್ಲ ಹುಡುಗಿ ನನ್ನಲ್ಲೀಗ ಏನೂ ಉಳಿದಿಲ್ಲ
ನಿನ್ನ ಮೇಲಿನ ಪ್ರೀತಿಯ ಹೊರತು....!!!!!!!!!!!!!!!

Tuesday, April 1, 2008

ನೀನು ಬಂದೆ......

ಇದ್ದೆ ನಾನು ಸುಮ್ಮನೇ, ಒಬ್ಬನೇ.....
ಹೌದು ಇದ್ದೆ ಒಬ್ಬನೇ......
ಯಾರೂ ಇರಲಿಲ್ಲ ನನ್ನ ಮನದಲ್ಲಿ......
ಬರಡು ಬಿದ್ದಿತ್ತು.....
ಕೊರಡು ಕೊನರುವಂತಿರಲಿಲ್ಲ.....
ಒರತೆ ಮತ್ತೆ ೊರೆಯುವಂತಿರಲಿಲ್ಲ....
ಇದ್ದೆ ನಾನು ನನ್ನ ಪಾಡಿಗೆ.....

ಬಂದೆಯಲ್ಲ ನೀನು ನನ್ನ ಹಾದಿಗೆ....
ಮುಂದೆ ನನ್ನ ಹಾಡಿಗೆ....
ಏನು ಕಂಡಿದ್ದೆಯೇ ಹುಡುಗಿ ಈ ಬರ ಬಿದ್ದ ಎದೆಯಲ್ಲಿ.....

ಮುಂದೆ....

ಓಹ್...
ಕೊರಡೂ ಕೊನರಿತಲ್ಲಿ...!
ಒರತೆ ತುಂಬಿ ತುಳುಕಿತಲ್ಲಿ....!
ಬತ್ತಿದ ನದಿ ಉಕ್ಕಿ ಹರಿಯಿತಿಲ್ಲಿ....!
ಎಂತಹ ಮಾಟಗಾತಿಯೆ ನೀನು...?!
ಎಲ್ಲಿ ಕಲಿತೆ ಈ ವಿದ್ಯೆ....?!
ಓಹ್.....

ನಿಂಗೊತ್ತಾ....

ನಿಂಗೊತ್ತಾ ಹುಡುಗಿ, ನಾನು ಹೀಗೆ ನಿನ್ನನ್ನುದ್ದೇಶಿಸಿ ಹೀಗೆ ಈ ಬ್ಲಾಗಿನಲ್ಲಿ ಮಾತಾಡ್ತಾ ಹೋಗ್ತಿರೋದು? ಗೊತ್ತಿರ್ಲಿಕ್ಕಿಲ್ಲ ಅಲ್ವಾ? ಗೊತ್ತಾಗೋದು ಬೇಡ ಬಿಡು:
ನಿನಗೀಗ ನನ್ನ ಮೇಲೆ ಬೇಸರ..........
ಸರಿಯಲಿ ಈ ಬೇಸರದ ನೇಸರ......
ಅರಳಲಿ ಮತ್ತೆ ಒಲವ ಚಂದಿರ......
ಅಲ್ಲಿಯವರೆಗೆ ಹೀಗೇ ನಡೆಯತ್ತಿರುತ್ತೇನೆ ಈಗೇಕೆ, ಅವಸರ....